ಯಾರಿಗೆ ಯಾವ ಸ್ಥಾನ ನೀಡಬೇಕೆಂಬುದು ಹೈಕಮಾಂಡ್‍ಗೆ ಗೊತ್ತಿದೆ : ಜಿ.ಪರಮೇಶ್ವರ್

Update: 2024-06-30 13:35 GMT

ಬೆಂಗಳೂರು : ಯಾವ ಸಮುದಾಯ ಪಕ್ಷದ ಜತೆ ಇದೆ. ಯಾವ ಸಮುದಾಯಕ್ಕೆ ಸ್ಥಾನ ನೀಡಬೇಕು ಎಂಬುವುದು ಹೈಕಮಾಂಡ್‍ಗೆ ಗೊತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಮ್ಮ ಪರ ನಿಲ್ಲುವ ಸಮುದಾಯ ಯಾವುದೆಂದು ನೋಡಿ ಹೈಕಮಾಂಡ್ ನಿರ್ಧಾರ ಮಾಡಲಿದೆ. ಅಲ್ಲದೆ, ಬೇರೆ ಬೇರೆ ಸಮುದಾಯದವರು ಸ್ಥಾನಕ್ಕೆ ಬೇಡಿಕೆ ಇಡುವುದು ತಪ್ಪಲ್ಲ ಎಂದರು.

ಡಿ.ಕೆ. ಶಿವಕುಮಾರ್ ಅವರು ಎರಡು ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿನೂ ಗಮನ ಕೊಡಬೇಕು.ಅಲ್ಲದೆ, ಎರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟ ಎಂಬುದು ಡಿ.ಕೆ.ಶಿವಕುಮಾರ್‌ಗೂ ಗೊತ್ತು. ಹಾಗಾಗಿ ಹೈಕಮಾಂಡ್ ಸರಿಯಾದ ಸಮಯದಲ್ಲಿ ಬದಲಾವಣೆ ಮಾಡುತ್ತಾರೆ ಎಂಬುದು ಅವರಿಗೆ ಗೊತ್ತು ಎಂದು ತಿಳಿಸಿದರು.

ನಾವು ಹೊಸದಿಲ್ಲಿಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದಾಗ ರಾಜಕೀಯವಾಗಿ ಸೌಹಾರ್ದಯುತವಾಗಿ ಚರ್ಚೆ ಮಾಡಿದ್ದೇವೆ. ಆದರೆ, ಹೆಚ್ಚುವರಿ ಡಿಸಿಎಂ ಬಗ್ಗೆ ಯಾರೂ ಪ್ರಸ್ತಾಪ ಮಾಡಲಿಲ್ಲ ಎಂದು ಅವರು ಹೇಳಿದರು.

ನಾನು ಪೊಲೀಸ್ ಇಲಾಖೆಯ ಕೆಲ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಕೇಳಿದ್ದೇನೆ. ನಿರ್ಭಯಾ ಯೋಜನೆಯಡಿ ಪ್ರತೀ ಪಟ್ಟಣಕ್ಕೆ ತಲಾ 200 ಕೋಟಿ ರೂ. ಕೊಡಲು ಮನವಿ ಮಾಡಲಾಗಿದೆ. ಆಧುನಿಕ ಬಾಡಿ ಕ್ಯಾಮರಾಗಳನ್ನು ಪೊಲೀಸರಿಗೆ ವಿತರಿಸಲು ಅನುದಾನ ಕೇಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News