ಎಸ್‍ಟಿಯಿಂದ ತಳವಾರ ಸಮುದಾಯ ಕೈಬಿಡುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2023-12-26 15:29 GMT

ಬೆಂಗಳೂರು: ಪರಿಶಿಷ್ಟ ಪಂಗಡಗಳ ಅಡಿ ನಾಯಕ, ನಾಯ್ಕ್, ತಳವಾರ, ಬೇಡ, ಬೇಡರ ಮತ್ತು ವಾಲ್ಮೀಕಿ ಸಮುದಾಯಗಳನ್ನು ಸಂವಿಧಾನದ(ಎಸ್ಟಿ) ಆದೇಶ(ತಿದ್ದುಪಡಿ) ಕಾಯಿದೆ 1991 ಮತ್ತು ಸಂವಿಧಾನದ(ಎಸ್ಟಿ) ಆದೇಶ(ತಿದ್ದುಪಡಿ) ಕಾಯಿದೆ 2020ರ ಅಡಿ ಸೇರ್ಪಡೆ ಮಾಡಿರುವುದನ್ನು ತಿರಸ್ಕರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರಿನ ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ಪರವಾಗಿ ಮಹೇಂದ್ರ ಕುಮಾರ್ ಮಿತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠವು ನಡೆಸಿದೆ.

ಯಾವ ಸಮುದಾಯವನ್ನು ಪರಿಶಿಷ್ಟ ಜಾತಿ/ಪಂಗಡವನ್ನಾಗಿ ಸೇರ್ಪಡೆ ಮಾಡಬೇಕು ಎಂಬುದು ಶಾಸನಸಭೆಯ ನೀತಿಯ ಭಾಗವಾಗಿದ್ದು, ಸಾಂವಿಧಾನಿಕ ನಿಬಂಧನೆ ಉಲ್ಲಂಘನೆಯಾಗಿರುವುದನ್ನು ಸಾಬೀತುಪಡಿಸದಿದ್ದರೆ ನ್ಯಾಯಾಲಯವು ಸಾಮಾನ್ಯವಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಹಲವು ವಿಚಾರಗಳು ಶಾಸನ ನೀತಿಯ ಭಾಗವಾಗಲಿದ್ದು, ನ್ಯಾಯಾಲಯ ಮೌಲ್ಯಮಾಪನ ಕೈಗೆತ್ತಿಗೊಳ್ಳಲಾಗದು. ಹೀಗಾಗಿ, ಈ ವಿಚಾರದಲ್ಲಿ ನ್ಯಾಯಪೀಠವು ಮಧ್ಯಪ್ರವೇಶಿಸುವುದಿಲ್ಲ ಎಂದಿದೆ.

ಅಸಹಾಯಕ ಸಮುದಾಯಗಳನ್ನು ಮೇಲೆತ್ತಲು ಸಾಂವಿಧಾನಿಕ ನಿಬಂಧನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾಂವಿಧಾನಿಕ (ಪರಿಶಿಷ್ಟ ಪಂಗಡಗಳು) ಆದೇಶ ಕಾಯಿದೆಯಲ್ಲಿ ಯಾವೆಲ್ಲಾ ಸಮುದಾಯಗಳನ್ನು ಸೇರ್ಪಡೆ ಮಾಡಬೇಕು ಮತ್ತು ಕೈಬಿಡಬೇಕು ಎಂಬುದಕ್ಕೆ ಶಾಸನ ರೂಪಿಸುವುದು ಸಂಸತ್‍ನ ವಿಶೇಷಾಧಿಕಾರವಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯಗಳು ಸಂಸತ್/ವಿಧಾನ ಮಂಡಲದ ಜೊತೆ ಅಭಿಪ್ರಾಯಗಳ ಸ್ಪರ್ಧೆ ನಡೆಸಲಾಗದು ಎಂದು ನ್ಯಾಯಪೀಠವು ತಿಳಿಸಿದೆ.

ಎಸ್‍ಸಿ/ಎಸ್‍ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ನಾಯಕ, ನಾಯ್ಕ್, ತಳವಾರ, ಬೇಡ, ಬೇಡರ ಮತ್ತು ವಾಲ್ಮೀಕಿ ಇವರು ಪ್ರಕರಣ ದಾಖಲಿಸಲು ಮುಂದಾದರೆ ಅದನ್ನು ತಡೆಯಬೇಕು ಹಾಗೂ ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಸಮುದಾಯಗಳಿಂದ ಹೊರಗಿಡಬೇಕು ಎಂದು ಅರ್ಜಿದಾರರು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News