ಅಕ್ರಮ ಆಸ್ತಿ ಗಳಿಕೆ ಪ್ರಕರಣ | ಡಿಕೆಶಿ ವಿರುದ್ಧದ ಸಿಬಿಐ ತನಿಖೆ ವಾಪಸ್ ಪಡೆದಿದ್ದ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ವಾಪಸ್ ಪಡೆದಿದ್ದ ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.
ಕ್ಯಾಬಿನೆಟ್ ನಿರ್ಧಾರ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಮಾಡಿದ ಹೈಕೋರ್ಟ್, ಡಿ.ಕೆ.ಶಿವಕುಮಾರ್‌ಗೆ ರಿಲೀಫ್ ನೀಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಹಿಂದಿನ ಬಿಜೆಪಿ ಸರಕಾರ ನೀಡಿದ್ದ ಅನುಮತಿಯನ್ನು ಕಾಂಗ್ರೆಸ್ ಸರಕಾರ ಹಿಂಪಡೆಯುವ ಮೂಲಕ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ನೀಡಿದ್ದರು.
ಹೀಗಾಗಿ ಸರಕಾರ ನಿರ್ಧಾರ ಪ್ರಶ್ನಿಸಿ ಸಿಬಿಐ, ಶಾಸಕ ಯತ್ನಾಳ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸಿಬಿಐ ಮತ್ತು ಸರ್ಕಾರದ ನಡುವೆ ವಿವಾದವಿದೆ. ಹಾಗಾಗಿ ಸುಪ್ರೀಂಕೋರ್ಟ್ ತೀರ್ಮಾನ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಗಳನ್ನು ವಜಾಗೊಳಿಸಿದೆ. ಆ ಮೂಲಕ ಡಿಸಿಎಂ ಡಿಕೆಶಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.