ಸ್ವತಂತ್ರ ಫೆಲೆಸ್ತೀನ್ ನಿರ್ಮಾಣಕ್ಕೆ ಅಂತರ್ ರಾಷ್ಟ್ರೀಯ ಸಮುದಾಯ ಕೈ ಜೋಡಿಸಬೇಕು: ಬಿ.ಟಿ.ವೆಂಕಟೇಶ್

Update: 2023-10-26 14:10 GMT

ಬೆಂಗಳೂರು, ಅ.26: ಇಸ್ರೇಲ್ ಹಾಗೂ ಫೆಲೆಸ್ತೀನ್ ನಡೆಯುತ್ತಿರುವ ಯುದ್ಧವು ಒಂದು ಜನಾಂಗೀಯ ದ್ವೇಷದ ಯುದ್ಧವಾಗಿ ಪರಿಣಮಿಸಿದೆ. ಕಳೆದ ಒಂದು ಶತಮಾನದ ಹಿಂದಿನಿಂದಲೂ ಇದರ ವಿರುದ್ಧ ಹೋರಾಟ ನಡೆಯುತ್ತಿದೆ. ತಮ್ಮ ನೆಲದಲ್ಲೆ ತಾವು ಪರಕೀಯರಂತೆ ಬದುಕುವ ಸ್ಥಿತಿ ಫೆಲೆಸ್ತೀನಿಯರದ್ದಾಗಿದೆ ಎಂದು *ನ್ಯಾಯವಾದಿ ಬಿ.ಟಿ.ವೆಂಕಟೇಶ್ ತಿಳಿಸಿದರು*.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಕರ್ನಾಟಕದ ಸಂಘಟನೆಗಳ ಮತ್ತು ಧಾರ್ಮಿಕ ನೇತಾರರ ಫೆಲೆಸ್ತೀನ್ ಸಹಾನುಭೂತಿ ಒಕ್ಕೂಟ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಭಾರತವು ಯಾವಾಗಲೂ ಫೆಲೆಸ್ತೀನ್ ನೊಂದಿಗೆ ನಿಂತಿದೆ. ಫೆಲೆಸ್ತೀನಿಯರಿಗಾಗಿ ಅವರದೆ ಆದ ಒಂದು ಹೊಸ ಸ್ವಾಯತ್ತ ರಾಷ್ಟ್ರವನ್ನು ಕಟ್ಟಿ ಕೊಡುವ ಜವಾಬ್ದಾರಿ ಅಂತರ್‍ರಾಷ್ಟ್ರೀಯ ಸಮುದಾಯದ ಮೇಲಿದೆ. ಇಸ್ರೇಲ್ ಪ್ರಚೋದನೆಯಿಂದಾಗಿ ಈ ಯುದ್ಧ ನಡೆಯುತ್ತಿದ್ದು, ಇಸ್ರೇಲ್ ಇಸ್ರೇಲ್ ಯುದ್ಧೋಪರಾಧಿ ಆಗಿದೆ. ಅದನ್ನು ಅಂತರ್‍ರಾಷ್ಟ್ರೀಯ ನ್ಯಾಯಾಲಯದ ಅಡಿಯಲ್ಲಿ ತಂದು ನಿಲ್ಲಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದರು.

ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯದಿಂದಾಗಿ ಸುಮಾರು 6 ಕೋಟಿಗೂ ಹೆಚ್ಚು ಫೆಲೆಸ್ತೀನಿಯರು ತಮ್ಮ ದೇಶವನ್ನು ತೊರೆದು ಬೇರೆ ಬೇರೆ ಕಡೆ ಆಶ್ರಯ ಪಡೆದಿದ್ದಾರೆ. ಈ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಒದಗಿಸಲು, ಅಂತರ್‍ರಾಷ್ಟ್ರೀಯ ಸಮುದಾಯಕ್ಕೆ ಈವರೆಗೆ ಸಾಧ್ಯವಾಗಿಲ್ಲ ಎಂದು ವೆಂಕಟೇಶ್ ಹೇಳಿದರು.

ಇಸ್ರೇಲ್ ಮಾಡಿರುವ ದೌರ್ಜನ್ಯವನ್ನು ಎಲ್ಲರೂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷದ ಇತಿಹಾಸವನ್ನು ನೋಡಿದರೆ ಫೆಲೆಸ್ತೀನ್‍ನಲ್ಲಿ ಅಲ್ ಅಕ್ಸಾ ಮಸೀದಿಯ ಸುತ್ತಮುತ್ತಲು ಇರುವ ಫೆಲೆಸ್ತೀನಿಯರ ಮನೆಗಳನ್ನು ಖಾಲಿ ಮಾಡಿಸಲಾಗುತ್ತಿದೆ. ಜೆರುಸಲೇಂ ನಗರದಲ್ಲಿ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಹಮಾಸ್ ದಾಳಿ ಮಾಡಿದೆ ಎಂದು ಏಕಾಏಕಿ ಯುದ್ಧ ಘೋಷಿಸಿ, ಸಾವಿರಾರು, ಮಹಿಳೆಯರು, ಮಕ್ಕಳ ಸಾವಿಗೆ ಇಸ್ರೇಲ್ ಕಾರಣವಾಗಿದೆ ಎಂದು ಅವರು ಹೇಳಿದರು.

ಇಸ್ರೇಲ್ ದಾಳಿಗೆ ನಾಶ ಆಗಿರುವುದು ಆಸ್ಪತ್ರೆಗಳು, ಶಾಲೆಗಳು, ಮನೆಗಳು, ಅಂತರ್‍ರಾಷ್ಟ್ರೀಯ ಕಾನೂನುಗಳು ಯುದ್ಧದ ಸಂದರ್ಭದಲ್ಲಿ ಈ ರೀತಿಯ ನಾಶಕ್ಕೆ ಅವಕಾಶ ನೀಡುವುದಿಲ್ಲ. ಯುದ್ಧಪೀಡಿತ ಪ್ರದೇಶದಲ್ಲಿನ ಜನರಿಗೆ ನೀರು, ವಿದ್ಯುತ್, ಆಹಾರ ಹಾಗೂ ಮನುಷ್ಯ ಬದುಕುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ವೆಂಕಟೇಶ್ ತಿಳಿಸಿದರು.

ಈ ಯುದ್ಧ ನಿಲ್ಲಲೇಬೇಕು. ಇದನ್ನು ನಿಲ್ಲಿಸುವ ಜವಾಬ್ದಾರಿ ಪ್ರಪಂಚದ ಎಲ್ಲ ದೇಶಗಳ ಮೇಲಿದೆ. ಯುಕ್ರೇನ್ ಜನ ರಶ್ಯನ್ನರು ನಮ್ಮ ಜಮೀನು ಕಬಳಿಸುತ್ತಿದ್ದಾರೆ. ನಾವು ನಮ್ಮ ರಕ್ಷಣೆಗೆ ಹೋರಾಟ ಮಾಡುತ್ತಿದೇವೆ ಎಂದಾಗ ಜಗತ್ತಿನ ವಿವಿಧ ಭಾಗಗಳಿಂದ ಅವರಿಗೆ ನೆರವು ಸಿಕ್ಕಿತ್ತು. ಆದರೆ, ಫೆಲೆಸ್ತೀನ್ ನಲ್ಲಿ ಶತಮಾನದಿಂದ ಹೋರಾಟ ನಡೆಯುತ್ತಿದ್ದರೂ ಯಾರೊಬ್ಬರೂ ಚಕಾರ ಎತ್ತದೆ ಇರುವುದು ಇಬ್ಬಗೆಯ ನೀತಿ ಎಂದು ಅವರು ತಿಳಿಸಿದರು.

ಯುಕ್ರೇನ್ ಹೇಗೆ ಒಂದು ಸ್ವತಂತ್ರ ರಾಷ್ಟ್ರವೋ, ಹಾಗೆಯೇ ಫೆಲೆಸ್ತೀನ್ ಕೂಡ ಸ್ವತಂತ್ರ ರಾಷ್ಟವಾಗಿ ಇರಬೇಕು. 1948ರ ಮುಂಚೆ ಇಸ್ರೇಲ್ ಎಂಬ ದೇಶವೆ ಇರಲಿಲ್ಲ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಇದ್ದ ಯಹೂದಿಗಳನ್ನು ತಂದು ಈ ದೇಶ ಹುಟ್ಟು ಹಾಕಲಾಯಿತು ಎಂದು ವೆಂಕಟೇಶ್ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್ ಮಾತನಾಡಿ, ಸುಮಾರು 2.3 ದಶಲಕ್ಷ ಬಡ ಜನರಿಗೆ ನೆಲೆಯಾಗಿರುವ ಕಿರಿದಾದ ಫೆಲೆಸ್ತೀನ್ ಭೂಮಿಯ ಮೇಲೆ ಇಸ್ರೇಲ್ ನಿರಂತರವಾಗಿ ಮಾಡುತ್ತಿರುವ ಬಾಂಬ್ ದಾಳಿಯಿಂದಾಗಿ ಸಾವಿರಾರು ಅಮೂಲ್ಯ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ. ಅಫ್ಘಾನಿಸ್ತಾನದ ಮೇಲೆ ನ್ಯಾಟೋ ಒಂದು ವರ್ಷದಲ್ಲಿ ಸುರಿದಿದ್ದ ಬಾಂಬುಗಳ ಪ್ರಮಾಣವು ಗಾಝಾ ಪಟ್ಟಿಯ ಮಏಲೆ ಕೇವಲ ಒಂದು ವಆರದಲ್ಲಿ ಸುರಿಸಲಾಗಿದೆ ಎಂದರು.

2800 ಮಕ್ಕಳು, ಹಲವಾರು ಮಹಿಳೆಯರು ಸೇರಿದಂತೆ 6 ಸಾವಿರ ಜನರು ಹುತಾತ್ಮರಾಗಿದ್ದಾರೆ. ಸುಮಾರು 16 ಸಾವಿರ ಜನ ಗಾಯಗೊಂಡಿದ್ದಾರೆ. 31 ಮಸೀದಿಗಳು, 4 ಚರ್ಚ್‍ಗಳು, ಶಾಲೆಗಳು, ಆಸ್ಪತ್ರೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ. ಆಹಾರ, ನೀರು, ಇಂಧನ, ವಿದ್ಯುತ್, ಔಷಧಗಳ ಮೇಲೆ ದಿಗ್ಬಂಧನ ಹೇರಲಾಗಿದೆ ಎಂದು ಅವರು ಹೇಳಿದರು.

ಕೂಡಲೆ ಕದನ ವಿರಾಮ ಘೋಷಿಸಬೇಕು, ಇಸ್ರೇಲ್ ಸೇನೆ ತನ್ನ ಮುತ್ತಿಗೆಯನ್ನು ತೆಗೆಯಬೇಕು, ಮಾನವೀಯ ಪರಿಹಾರ ಒದಗಿಸಬೇಕು, ಮೂಲಭೂತ ಸೌಕರ್ಯಗಳ ಮರು ಸ್ಥಾಪನೆಯಾಗಬೇಕು, ನಾಗರಿಕರಿಗೆ ರಕ್ಷನೆ ಒದಗಿಸುವ ಕೆಲಸ ಆಗಬೇಕು. ಫೆಲೆಸ್ತೀನ್-ಇಸ್ರೇಲ್ ನಡುವಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನಮ್ಮ ದೇಶವು ಮಧ್ಯವರ್ತಿಯ ಪಾತ್ರವನ್ನು ವಹಿಸಬೇಕು ಎಂದು ಬೆಳಗಾಮಿ ಮುಹಮ್ಮದ್ ಸಾದ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಮೀಯತುಲ್ ಉಲಮಾ ಕರ್ನಾಟಕದ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮಾಸ್ ಮೀಡಿಯಾದ ಅಕ್ಬರ್ ಅಲಿ, ಮುಸ್ಲಿಮ್ ಮುತ್ತಹಿದ ಮಹಝ್ ಸಂಚಾಲಕ ಮಸೂದ್ ಅಬ್ದುಲ್ ಖಾದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News