ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆ ಇಲ್ಲ: ಡಿ.ಕೆ. ಶಿವಕುಮಾರ್

Update: 2024-03-31 13:38 GMT

ಬೆಂಗಳೂರು: ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಒಂದಾಗಿದ್ದಾರೆ. ಆದರೆ, ಕಾರ್ಯಕರ್ತರು ಒಂದಾಗುತ್ತಿಲ್ಲ. ಅಲ್ಲಿ ದಿನಬೆಳಗಾದರೆ ರಾಜಕೀಯ ಸಂಘರ್ಷ ನಡೆಯುತ್ತಿದೆ. ಆದುದರಿಂದಲೆ, ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ ಮಾಡಲು ಚನ್ನಪಟ್ಟಣವನ್ನು ಆಯ್ಕೆ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ರವಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಏನಾಗಲಿದೆ ಎಂಬ ಅನುಭವ ಸಿ.ಪಿ.ಯೋಗೇಶ್ವರ್ ಗೆ ಇಲ್ಲ. ಜೆಡಿಎಸ್ ಕಾರ್ಯಕರ್ತರು ಅತಂತ್ರ ಸ್ಥಿತಿ ತಲುಪಿದ್ದಾರೆ. ಅಲ್ಲಿನ ಜನಕ್ಕೆ ಡಿ.ಕೆ.ಸುರೇಶ್ ಏನು ಎಂಬುದು ಗೊತ್ತಿದೆ ಎಂದರು.

ಅಮಿತ್ ಶಾ ಬಂದರೆ ಬಲ ಬರಬಹುದು ಎಂದು ರೋಡ್ ಶೋ ಮಾಡಿಸುತ್ತಿದ್ದಾರೆ. ಇಬ್ಬರೂ ಸೇರಿ ಕಾರ್ಯಕರ್ತರ ಸಭೆ ಯಾಕೆ ಮಾಡಲಿಲ್ಲ? ಇವರಿಬ್ಬರೂ ಒಂದಾದ ತಕ್ಷಣ ಕಾರ್ಯಕರ್ತರು ಒಂದಾಗುತ್ತಾರಾ? ರಾಮನಗರ ಹಾಗೂ ಮಂಡ್ಯ ಜಿಲ್ಲೆ ರಾಜಕಾರಣ ನೋಡಲು ಆಗುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

ಕಳೆದ ಬಾರಿ ಚುನಾವಣೆಯಲ್ಲಿ ನಿಖಿಲ್ ಪರ ಪ್ರಚಾರ ಮಾಡಲು ಚಲುವರಾಯಸ್ವಾಮಿಗೆ ಆಹ್ವಾನ ನೀಡಿ ಎಂದು ಕುಮಾರಸ್ವಾಮಿಗೆ ಹೇಳಿದ್ದೆ. ಅನಿತಾ ಕುಮಾರಸ್ವಾಮಿ ಕೂಡ ಚಲುವರಾಯಸ್ವಾಮಿ ಮನೆಗೆ ಹೋಗಲು ಸಿದ್ಧರಿದ್ದರು. ಆದರೆ ಕುಮಾರಸ್ವಾಮಿ ತಡೆದಿದ್ದರು. ಈಗ ಎಲ್ಲರ ಮನೆಗೆ ಹೋಗಲು ಸಿದ್ಧ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅವರಲ್ಲಿ ಆಗಿರುವ ಪರಿವರ್ತನೆಗೆ ಬಹಳ ಸಂತೋಷ ಎಂದು ಶಿವಕುಮಾರ್ ಹೇಳಿದರು.

ಮೈತ್ರಿ ಸರಕಾರವನ್ನು ಬೀಳಿಸಿದ ಬಿಜೆಪಿ ನಾಯಕರ ಜತೆಗೆ ತಬ್ಬಾಡುತ್ತಿದ್ದಾರೆ. ಇದನ್ನು ಆ ಮತದಾರರೆ ತೀರ್ಮಾನ ಮಾಡಬೇಕು. ಬಿಜೆಪಿ ಗೊಂದಲದ ಗೂಡಾಗಿದೆ. ಸದಾನಂದ ಗೌಡ, ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಸೇರಿದಂತೆ ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಏಕಾಏಕಿ ಕೈಬಿಟ್ಟಿದ್ದಾರೆ. ನಾವು ಭವಿಷ್ಯದಲ್ಲಿ 30-40 ವರ್ಷಗಳ ಕಾಲ ರಾಜಕಾರಣ ಮಾಡಬಲ್ಲ ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಕೋಲಾರದಲ್ಲಿ ಗೆಲುವು: ಕೆ.ಎಚ್.ಮುನಿಯಪ್ಪ, ರಮೇಶ್ ಕುಮಾರ್ ಹಾಗೂ ಇತರ ನಾಯಕರು ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲು ಸಂಕಲ್ಪ ಮಾಡಿದ್ದಾರೆ. ಮಾಧ್ಯಮಗಳ ಸಮೀಕ್ಷೆಗಳಲ್ಲಿ ಎನ್.ಡಿ.ಎ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಂದಿದೆ. ನಾವು ಕೊಟ್ಟಿರುವ ಕಾರ್ಯಕ್ರಮ, ನಿಲ್ಲಿಸಿರುವ ಅಭ್ಯರ್ಥಿಗಳನ್ನು ದೇಶದಲ್ಲೆ ಬೇರೆಯವರು ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸುಮಲತಾ ವಿಚಾರ ಸ್ಥಳೀಯ ನಾಯಕರಿಗೆ ಬಿಟ್ಟದ್ದು: ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರಿಗೂ ಜೆಡಿಎಸ್ ನಾಯಕರಿಗೆ ನಡೆದ ಮಾತಿನ ಕಾಳಗ ಹಾಗೂ ಸ್ವಾಭಿಮಾನದ ಹೆಸರಲ್ಲಿ ಮತಯಾಚನೆ ಮಾಡಿದ್ದಕ್ಕೆ ಅವರು ಬದ್ಧರಿದ್ದರೆ ಪಕ್ಷಕ್ಕೆ ಕರೆತರುವ ಬಗ್ಗೆ ಆಲೋಚನೆ ಮಾಡಬಹುದು. ಈ ವಿಚಾರದಲ್ಲಿ ತೀರ್ಮಾನವನ್ನು ಸ್ಥಳೀಯ ನಾಯಕರಿಗೆ ಬಿಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ರಾಜರಾಜೇಶ್ವರಿ ನಗರದಲ್ಲಿ ನಮ್ಮ ಅಭ್ಯರ್ಥಿ ಉಪ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಸೋತರೆ, ವಿಧಾನಸಭೆ ಚುನಾವಣೆಯಲ್ಲಿ ಕೇವಲ 10 ಸಾವಿರ ಮತಗಳಿಂದ ಸೋತಿದ್ದೆವು. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 25-30 ಸಾವಿರ ಮುನ್ನಡೆ ಪಡೆಯುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಶಾಮನೂರು ಹೇಳಿಕೆ ಖಂಡನೀಯ:

‘ಹೆಣ್ಣು ಕುಟುಂಬದ ಕಣ್ಣು. ಕಾಂಗ್ರೆಸ್ ಪಕ್ಷ ಶಾಮನೂರು ಶಿವಶಂಕರಪ್ಪ ಮಾತನ್ನು ಒಪ್ಪುವುದಿಲ್ಲ. ಅವರಿಗೆ ವಯಸ್ಸಾಗಿದೆ. ಯಾವ ಲೆಕ್ಕಾಚಾರದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಮಹಿಳೆಯರ ಸಬಲೀಕರಣಕ್ಕೆ ಬದ್ಧವಾಗಿದೆ. ಅವರ ಸೊಸೆ ಸೇರಿದಂತೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಆರು ಮಹಿಳೆಯರನ್ನು ಕಣಕ್ಕೆ ಇಳಿಸಿದ್ದೇವೆ. ನಮ್ಮ ಕಾರ್ಯಕ್ರಮಗಳು ಮಹಿಳೆ ಕೇಂದ್ರಿತವಾಗಿದೆ. ಅವರ ಬದುಕಿಗೆ ಸಂಬಂಧಿಸಿದೆ. ಶಾಮನೂರು ಹೇಳಿಕೆ ಖಂಡನೀಯ’

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News