ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿಯಲು ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ: ಆರ್.ಅಶೋಕ್

Update: 2024-08-11 10:24 GMT

ಬೆಂಗಳೂರು, ಆ.11: ರಾಜ್ಯ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದು ಬಿದ್ದಿದೆ. ಡ್ಯಾಂನ ಹೊರ ಹರಿವು ಏರಿಕೆಯಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ನದಿ ಪಾತ್ರದ ರೈತರನ್ನು ಚಿಂತೆಗೀಡು ಮಾಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಳೆದ ವರ್ಷವೆಲ್ಲ ಬರಗಾಲದಿಂದ ತತ್ತರಿಸಿದ್ದ ರೈತರು ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿರುವುದರಿಂದ ಎರಡು ಬೆಳೆ ತೆಗೆಯಬಹುದು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈಗ ಬಿತ್ತನೆಯಾಗಿರುವ ಒಂದು ಬೆಳೆಯೂ ಸಹ ಕೈತಪ್ಪಬಹುದು ಎಂಬ ಆತಂಕದಲ್ಲಿದ್ದಾರೆ.

ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಇಲಾಖೆಗಳ ನಿರ್ವಹಣೆಗಿಂತ ಕಾಂಗ್ರೆಸ್ ಹೈಕಮಾಂಡ್ ಏಜೆಂಟ್ ಕೆಲಸವೇ ಹೆಚ್ಚಾಗಿದೆ. ಪ್ರಜೆಗಳ ಹಿತಕ್ಕಿಂತ, ಪಕ್ಷದ ಹಿತವೇ ಆದ್ಯತೆಯಾಗಿದೆ. ಭ್ರಷ್ಟಾಚಾರ, ರಾಜಕೀಯ ಮೇಲಾಟ, ಬಣ ಬಡಿದಾಟ, ಪಕ್ಕದ ರಾಜ್ಯಗಳ ಚುನಾವಣೆಗೆ ಹಣ ಹೊಂದಿಸುವಲ್ಲಿ ಬ್ಯುಸಿಯಾಗಿರುವ ಉಪಮುಖ್ಯಮಂತ್ರಿಗೆ ಇಲಾಖೆಯ ಕರ್ತವ್ಯ ನಿರ್ವಹಿಸಲು ಪಾಪ ಸಮಯ ಎಲ್ಲಿದೆ? ಎಂದು ಅವರು ಟೀಕಿಸಿದ್ದಾರೆ.

ಕಾಲಕಾಲಕ್ಕೆ ಜಲಾಶಯದ ತಾಂತ್ರಿಕ ಸಮಿತಿಯ ಸಭೆ ಮಾಡಿ ಡ್ಯಾಂನ ಸುರಕ್ಷತೆ, ನಿರ್ವಹಣೆ ಬಗ್ಗೆ ಗಮನ ಹರಿಸಿದಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕಳೆದ ವರ್ಷ ಬರಗಾಲದಿಂದ ಜಲಾಶಯ ಖಾಲಿಯಾಗಿದ್ದಾಗ ಡ್ಯಾಂನ ದುರಸ್ತಿ ಕಾರ್ಯ ಮಾಡಲು ಸಮಯವೂ ಇತ್ತು, ಅವಕಾಶವೂ ಇತ್ತು. ಆದರೆ ಸಿಎಂ ಕುರ್ಚಿ ಮೇಲೆ ಟವಲ್ ಹಾಕೋದರಲ್ಲೇ ಸದಾಕಾಲ ಬ್ಯುಸಿಯಾಗಿರುವ ಡಿಸಿಎಂ ಸಾಹೇಬರಿಗೆ ಡ್ಯಾಂ ರಿಪೇರಿ ಮಾಡಿಸಲು ಸಮಯ ಎಲ್ಲಿದೆ? ಆಸಕ್ತಿ ಎಲ್ಲಿದೆ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನವರೇ, ನಿಮ್ಮ ಅಧಿಕಾರದ ತೆವಲಿಗೆ ರೈತರ ಬದುಕಿನ ಜೊತೆ ಇನ್ನೆಷ್ಟು ದಿನ ಹೀಗೆ ಚೆಲ್ಲಾಟವಾಡುತ್ತೀರಿ? ನಿಮ್ಮ ದುರಾಡಳಿತದಿಂದ ಉತ್ತಮ ಮಳೆಯಾಗಿದ್ದರೂ ಇವತ್ತು ನಾಡಿನ ರೈತರು ಕಣ್ಣೀರಿಡುವ ಪರಿಸ್ಥಿತಿ ಬಂದಿದೆ. ನಿಮ್ಮ ದುರಾಡಳಿತದಿಂದ ಕನ್ನಡಿಗರಿಗೆ ಆದಷ್ಟು ಬೇಗ ಮುಕ್ತಿ ಬೇಕಿದೆ. ನಾಡಿನ ಅನ್ನದಾತರ ಶಾಪ ತಟ್ಟುವ ಮುನ್ನ ರಾಜೀನಾಮೆ ಕೊಟ್ಟು ತೊಲಗಿ ಎಂದು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News