ರಾಜ್ಯ ಸರಕಾರ ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆಗಳನ್ನು ತಂದಿದೆ: ಆರ್.ಅಶೋಕ್ ಟೀಕೆ
ಬೆಂಗಳೂರು, ಆ.14: ಕಾಂಗ್ರೆಸ್ ಸರಕಾರ ಸಂಪನ್ಮೂಲದ ಗ್ಯಾರಂಟಿ ಇಲ್ಲದೆ, ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆಗಳನ್ನು ತಂದಿದೆ. ಕಾಂಗ್ರೆಸ್ ಶಾಸಕರೇ ಸರಕಾರಕ್ಕೆ ಧಿಕ್ಕಾರ ಹಾಕುವ ಸ್ಥಿತಿ ಬರಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷದ ಸರ್ಕಾರ ಬಂದರೂ ಸಾಲ ಮಾಡಲೇಬೇಕು. ಇಂತಹ ಸ್ಥಿತಿಯಲ್ಲಿ ಸಂಪನ್ಮೂಲದ ಗ್ಯಾರಂಟಿಯೇ ಇಲ್ಲದೆ, ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆ ತರಲಾಗಿದೆ. ಇದನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬೆಸ್ಕಾಂ ಹಾಗೂ ಇಲಾಖೆಗಳು ನಷ್ಟದಲ್ಲಿವೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಧಿಕ್ಕಾರ ಹಾಕುವ ಸ್ಥಿತಿ ಬರಲಿದೆ. ಅದಕ್ಕೂ ಮುಂದೆ ಎಚ್ಚೆತ್ತುಕೊಳ್ಳಲಿ ಎಂದರು.
ಬೆಂಗಳೂರಿಗೆ ನಿಗದಿಯಾದ ಅನುದಾನಗಳನ್ನು ಈ ಹಿಂದೆಯೂ ಹಿಂಪಡೆಯಲಾಗಿದೆ. ನಗರದಲ್ಲಿ ಪ್ರವಾಹದ ನಿಯಂತ್ರಣಕ್ಕಾಗಿ ಯೋಜನೆ ರೂಪಿಸಲು ಬಿಜೆಪಿ ಸರಕಾರ ಅನುದಾನ ಮೀಸಲಿಟ್ಟಿತ್ತು. ಅದನ್ನು ಗ್ಯಾರಂಟಿಗೆ ನೀಡಲಾಗಿದೆ. ಪಾದಚಾರಿ ಮಾರ್ಗ, ಮೇಲ್ಸೇತುವೆ, ರಾಜಕಾಲುವೆ ಸೇರಿದಂತೆ ಎಲ್ಲ ಅಭಿವೃದ್ಧಿ ಯೋಜನೆಗಳ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಲಾಗಿದೆ. ಬಿಬಿಎಂಪಿ ಅನುದಾನ ಬಿಟ್ಟು, ಬಿಜೆಪಿ ಸರಕಾರ 8-9 ಸಾವಿರ ಕೋಟಿ ರೂ. ನೀಡಿತ್ತು. ಈಗ ಸರಕಾರ ಪಾಪರ್ ಆಗಿದೆ ಎಂದು ಟೀಕಿಸಿದರು.
ಜನ ಔಷಧಿ ಯೋಜನೆ ಕೇಂದ್ರ ಸರ್ಕಾರದ್ದು. ಇದರಿಂದ ಅತಿ ಕಡಿಮೆ ದರದಲ್ಲಿ ಔಷಧಿಗಳು ದೊರೆಯುತ್ತವೆ. ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರಿಗೆ ಲಾಬಿಗಳು ತಲೆ ಸವರಿದೆ. ಆದ್ದರಿಂದ ಇಂತಹ ಕೆಲಸ ಮಾಡಲು ಹೊರಟಿದ್ದಾರೆ. ಇವರಿಗೆ ಕಮಿಶನ್ ಸಿಗಲಿದೆ ಎಂಬ ಕಾರಣಕ್ಕೆ ಜನರಿಗೆ ದ್ರೋಹ ಬಗೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆ ಯಶಸ್ವಿ
ಇತ್ತೀಚೆಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಉತ್ತಮವಾಗಿ ಸಾಮೂಹಿಕ ನಾಯಕತ್ವದಲ್ಲಿ ಪಾದಯಾತ್ರೆ ನಡೆದಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನನಗೆ ಕರೆ ಮಾಡಿ, ಈ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಹೇಳಿದ್ದರು. ಪಾದಯಾತ್ರೆ ಯಶಸ್ವಿಯಾಗಿರುವುದರಿಂದಲೇ ಕಾಂಗ್ರೆಸ್ ನಾಯಕರು ಭಯಕ್ಕೊಳಗಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಸರ್ಕಾರದ ಎರಡು ಹಗರಣಗಳ ವಿರುದ್ಧ ಪಾದಯಾತ್ರೆಯ ಜೊತೆಗೆ, ಕೆಲವರು ರಾಜಭವನಕ್ಕೂ ದೂರು ಸಲ್ಲಿಸಿದ್ದಾರೆ ಎಂದರು.