ಬರ ಘೋಷಣೆಯನ್ನೇ ತಡ ಮಾಡಿ, ಈಗ ಕೇಂದ್ರದ್ದೇ ತಪ್ಪು ಎನ್ನುವ ರಾಜ್ಯ ಸರಕಾರಕ್ಕೆ ಮಾನ ಇಲ್ಲ : ಆರ್‌.ಅಶೋಕ್

Update: 2024-04-06 11:45 GMT
Photo : videograbX/@BJP4Karnataka

ಬೆಂಗಳೂರು : ಬರ ಘೋಷಣೆಯನ್ನೇ ತಡ ಮಾಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಸಂಪೂರ್ಣ ದಿವಾಳಿಯಾಗಿ ಮೂರು ತಿಂಗಳು ತಡವಾಗಿ ಬರ ಘೋಷಣೆ ಮಾಡಿದೆ. ಈಗ ಹಿಂಗಾರು ಬರಗಾಲದ ಘೋಷಣೆಯನ್ನೂ ಮಾಡಿಲ್ಲ ಎಂದು ವಿಧಾನಸಭೆಯ ಪ್ರತಿಪ್ಷಕ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

‌ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಬರಗಾಲದ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಕಿಸಿದ್ದರು. ಈ ಕುರಿತು ಪತ್ರಿಕೆಗಳಲ್ಲೂ ಅನೇಕ ವರದಿಗಳು ಬಂದಿವೆ. ಆದರೆ ಬರವನ್ನು ಘೋಷಣೆ ಮಾಡಲು ಸರಕಾರ ಮೂರು ತಿಂಗಳು ತೆಗೆದುಕೊಂಡಿದೆ. ಮಾಧ್ಯಮಗಳಲ್ಲಿ ವರದಿ ಬಂದಾಗ, ರೈತರು ಪ್ರತಿಭಟಿಸಿದಾಗಲೇ ಬರಗಾಲ ಘೋಷಿಸಿದ್ದರೆ ಕೇಂದ್ರ ಸರಕಾರದ ತಂಡ ಬೇಗ ಬಂದು ಪರಿಶೀಲನೆ ಮಾಡುತ್ತಿತ್ತು. ಬರ ಘೋಷಣೆಯನ್ನೇ ತಡ ಮಾಡಿ, ಈಗ ಕೇಂದ್ರದ ತಪ್ಪು ಎನ್ನುವ ರಾಜ್ಯ ಸರಕಾರಕ್ಕೆ ಮಾನ ಇಲ್ಲ ಎಂದು ದೂರಿದರು.

ಸಚಿವ ಕೃಷ್ಣ ಬೈರೇಗೌಡ ಅವರು ಅಷ್ಟೊಂದು ಪ್ರತಿಭಾವಂತರಾಗಿದ್ದರೆ ಸಂಸದರಾಗಿ ಅವರೇ ಹೋಗಿ ಪ್ರಶ್ನೆ ಕೇಳಬಹುದಿತ್ತು. ಒಬ್ಬ ರೈತರಿಗೆ 25 ಸಾವಿರ ರೂ. ನೀಡುವ ಬದಲು ಕೇವಲ 2 ಸಾವಿರ ರೂ. ನೀಡಿದ್ದೇವೆ ಎನ್ನುತ್ತಿದ್ದಾರೆ. ಕೇಂದ್ರ ಸರಕಾರದ ಹಣದಲ್ಲಿ ಬಾಕಿ ಉಳಿಸಿಕೊಂಡು ಅದೇ ಹಣವನ್ನು ನೀಡಲಾಗುತ್ತಿದೆ. ಕೇರಳ ಸರಕಾರದಂತೆ ಸುಪ್ರೀಂ ಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಳ್ಳುವುದಷ್ಟೇ ಬಾಕಿ ಉಳಿದಿದೆ. ಅಲ್ಲಿನ ಸರಕಾರ ದಿವಾಳಿಯಾದಂತೆ ಇಲ್ಲೂ ಸರಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

900 ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಿಎಂ ಸಿದ್ದರಾಮಯ್ಯ ಅವರಿಗೆ ಕರುಣೆ ಇಲ್ಲ. ಒಂದು ವರ್ಷದಲ್ಲೇ ಫ್ರೀ ಫ್ರೀ ಎಂದು ಅಭಿವೃದ್ಧಿಗೆ ಹಣ ಇಲ್ಲ. ಒಂದು ರಸ್ತೆ, ತಾಲೂಕು ಆಸ್ಪತ್ರೆ, ಶಾಲೆ ಯಾವುದನ್ನೂ ಕಟ್ಟಿಸಿಲ್ಲ. ರಸ್ತೆಗಳನ್ನು ನೋಡಿದರೆ ಒಂದು ದೇಶದ ಆರ್ಥಿಕ ಸ್ಥಿತಿ ಹೇಗಿದೆ ಎಂದು ತಿಳಿಯುತ್ತದೆ ಎಂಬ ಮಾತಿದೆ. ಆದರೆ ರಾಜ್ಯ ಸರಕಾರ ಯಾವ ರಸ್ತೆ ನಿರ್ಮಿಸಿದೆ?. ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡುವುದೇ ಸೂಕ್ತ ಎಂದರು.

ಈ ಹಿಂದಿನ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಪರಿಹಾರ ನೀಡಲು 9, 11 ತಿಂಗಳು ಕಾಲ ತೆಗೆದುಕೊಂಡಿದ್ದರು. ʼನನ್ನ ತೆರಿಗೆ ನನ್ನ ಹಕ್ಕುʼ ಎಂದು ಹೇಳಿ 15 ಲಕ್ಷ ರೂಪಾಯಿಯನ್ನು ಕೇರಳಕ್ಕೆ ಕೊಟ್ಟಿದ್ದಾರೆ. ತೆರಿಗೆ ಪಾಲಿನಲ್ಲಿ 2004-2014 ರ ಅವಧಿಯಲ್ಲಿ ಯುಪಿಎ 81,795 ಕೋಟಿ ರೂ. ರಾಜ್ಯಕ್ಕೆ ನೀಡಿದ್ದು, 2014-2024 ರ ಅವಧಿಯಲ್ಲಿ ಮೋದಿ ಸರ್ಕಾರ 2,82,791 ಕೋಟಿ ರೂ. ನೀಡಿದೆ. ಅಂದರೆ ಈ ಪ್ರಮಾಣ 242% ಕ್ಕೂ ಅಧಿಕವಾಗಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಪ್ರಕಾರ, ಪ್ರಕೃತಿ ವಿಕೋಪಕ್ಕೆ ಶಾಶ್ವತ ನಿಧಿಯಾಗಿ 5 ಸಾವಿರ ಕೋಟಿ ರೂ. ಎಂದು ತಿಳಿಸಿದ್ದರು. ಅದನ್ನು ಇನ್ನೂ ನೀಡಿಲ್ಲ ಎಂದು ದೂರಿದರು.

ಸಂತೆ ಭಾಷಣ ಮಾಡಲು ಕರೆಯುವುದಲ್ಲ

ಹಣಕಾಸು ಸಚಿವರನ್ನು ಸಂತೆ ಭಾಷಣ ಮಾಡಲು ಕರೆಯುವುದಲ್ಲ. ಸಂಸತ್ತಿಗೆ ಹೋಗಿ ಅರ್ಜಿ ನೀಡುವುದನ್ನು ಬಿಟ್ಟು ಸಂತೆ ಭಾಷಣದಲ್ಲಿ ಚರ್ಚೆ ಮಾಡಲು ಕಾಂಗ್ರೆಸ್‌ ಸರಕಾರ ಆಹ್ವಾನಿಸುತ್ತಿದೆ ಎಂದು ದೂರಿದರು.

 ಬಿಜೆಪಿಗೆ ಮಾತ್ರ ಅಧಿಕಾರವಿದೆ

ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಬಳಸಲು ಬಿಜೆಪಿಗೆ ಮಾತ್ರ ಅಧಿಕಾರವಿದೆ. ಚುನಾವಣಾ ಉದ್ದೇಶಕ್ಕೆ ಅವರ ಚಿತ್ರ ಬಳಸುವ ಹಕ್ಕು ಯಾರಿಗೂ ಇಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ಪಕ್ಷದಿಂದ ಆಯ್ಕೆಯಾದ ಬಳಿಕ ಆ ಪಕ್ಷಕ್ಕೆ ಋಣಿಯಾಗಿರಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News