ಆನೆ-ಮಾನವ ಸಂಘರ್ಷ ತಡೆಗೆ ರಾಜ್ಯ ಸರಕಾರ ದಿಟ್ಟ ಹೆಜ್ಜೆ: ಕೊಡಗಿನಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ

Update: 2023-08-26 12:23 GMT

ಮಡಿಕೇರಿ ಆ.26 : ಕೊಡಗು ಜಿಲ್ಲೆಯಲ್ಲಿ ಮಿತಿ ಮೀರಿರುವ ಆನೆ-ಮಾನವ ಸಂಘರ್ಷ ತಡೆಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಗಳನ್ನಿರಿಸಿದ್ದು, ಗ್ರಾಮೀಣ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಇನ್ನೂರು ಕಾಡಾನೆಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುತ್ತದೆಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿನ ಕಾಡಾನೆ ಹಾವಳಿ ಬಗೆಹರಿಕೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಜಿಲ್ಲೆಗೆ ಆಗಮಿಸಿದ ಸಚಿವ ಖಂಡ್ರೆ ಅವರು, ದಕ್ಷಿಣ ಕೊಡಗಿನ ತಿತಿಮತಿ ಬಳಿಯ ಬಂಬುಕಾಡು ಪೈಸಾರಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಅರಣ್ಯದಿಂದ ಹೊರ ಬಂದು ಜನವಸತಿಯ ಪ್ರದೇಶಗಳಲ್ಲಿ ಉಪಟಳ ನೀಡುತ್ತಿರುವ ಪುಂಡಾನೆಗಳಿಗೆ `ರೇಡಿಯೋ ಕಾಲರ್' ಅಳವಡಿಸಲು ಸ್ಪಷ್ಟ ನಿರ್ದೇಶನವನ್ನು ನೀಡಿದರು.

ರೈಲ್ವೆ ಹಳಿಗಳ ಬೇಲಿಗೆ ಸೂಚನೆ : ಕಾಡಾನೆಗಳ ಉಪಟಳ ಹೆಚ್ಚಾಗಿರುವ ಪ್ರದೇಶಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಹಳಿಗಳ ಬೇಲಿಯನ್ನು ನಿರ್ಮಿಸಿ, ಅರಣ್ಯ ಪ್ರದೇಶದಿಂದ ಕಾಡಾನೆಗಳು ಗ್ರಾಮೀಣ ಭಾಗಗಳಿಗೆ ನುಸುಳದಂತೆ ಕ್ರಮ ಕೈಗೊಳ್ಳಲು ಇದೇ ಸಂದರ್ಭ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಕಾಡಾನೆ ಹಾವಳಿ ಸಮಸ್ಯೆಯನ್ನು ಬಗೆಹರಿಸಲು ಕಳೆದ 20 ವರ್ಷಗಳಿಂದ ಕೈಗೊಳ್ಳಲು ಸಾಧ್ಯವಾಗದ ಕಾರ್ಯವನ್ನು ಈಗಿನ ರಾಜ್ಯ ಸರಕಾರ ಕೈಗೊಳ್ಳುತ್ತಿದೆ. ಕಾಡಾನೆ ಸಮಸ್ಯೆಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕೊಡಗಿಗೆ ಭೇಟಿ ನೀಡಿರುವುದಾಗಿ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುತ್ತ ತಿಳಿಸಿದರು.

ಜಿಲ್ಲೆಯಲ್ಲಿ ಖಾಲಿ ಇರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಶೀಘ್ರ ನೇಮಕ ಮಾಡಲಾಗುತ್ತದೆಂದು ತಿಳಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನರಿಗೆ ನೀಡಿದ್ದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ. ಅದರಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆಂದು ವಿಶ್ವಾಸದಿಂದ ನುಡಿದರು.

ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೆÇನ್ನಣ್ಣ, ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಹಲ ಪ್ರಮುಖರು ಹಾಜರಿದ್ದರು.

ವಿವಿಧ ಹಾಡಿಗಳಿಗೆ ಭೇಟಿ : ಸಚಿವ ಖಂಡ್ರೆ ಅವರು, ತಿತಿಮತಿಯ ಚೈನಿಹಡ್ಲು, ಬಂಬುಕಾಡು ಹಾಡಿಗೆ ಭೇಟಿ ನೀಡಿ ಹಾಡಿ ನಿವಾಸಿಗಳಿಂದ ಮಾಹಿತಿ ಪಡೆದರಲ್ಲದೆ, ಆನೆ ದಾಳಿಗೆ ಒಳಗಾದ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವ್ವನ ಹೇಳಿದರು. ಮಾಲ್ದಾರೆ ವ್ಯಾಪ್ತಿಯ ಅರೆಕಾಡು ಪೈಸಾರಿಗೆ ಭೇಟಿ ನೀಡಿ, ಅಲ್ಲಿನ ಕಾಡಾನೆ ಹಾವಳಿಯ ಬಗ್ಗೆ ಗ್ರಾಮೀಣರಿಂದ ಮಾಹಿತಿ ಪಡೆದುಕೊಂಡರು.

ಚೆಕ್ ವಿತರಣೆ : ಕಾಡಾನೆ ದಾಳಿಯಿಂದ ಮೃತಪಟ್ಟ ಸಿದ್ಧಾಪುರ ಬಳಿಯ ಬಾಡಗ-ಬಾನಂಗಾಲ ಗ್ರಾಮದ ನಿವಾಸಿ ಆಯಿಷ (63) ಅವರ ಮನೆಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಆಯಿಷ ಅವರ ಪುತ್ರ ಲತೀಫ್ ಅವರಿಗೆ ಸಾಂತ್ವನ ಹೇಳಿ, 5 ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News