‘ನೈಸ್ ಯೋಜನೆ’ ರಾಜ್ಯ‌ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು: ಕಾಂಗ್ರೆಸ್‌ ಶಾಸಕ ಟಿ.ಬಿ.ಜಯಚಂದ್ರ ಆಗ್ರಹ

Update: 2023-08-21 18:22 GMT

ಬೆಂಗಳೂರು, ಆ.21: ‘ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್ ಹೆದ್ದಾರಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ‘ನೈಸ್’ ರಸ್ತೆಯ ಅವಶ್ಯಕತೆಯಿಲ್ಲ. ಆದುದರಿಂದ, ರಾಜ್ಯ ಸರಕಾರವು ನೈಸ್ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ರಾಜ್ಯ ಸರಕಾರದ ಹೊಸದಿಲ್ಲಿಯಲ್ಲಿನ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಆಗ್ರಹಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ನೈಸ್ ಯೋಜನೆಗೆ 2016ರ ಡಿಸೆಂಬರ್ ನಲ್ಲಿ ನಾನೆ ಸದನ ಸಮಿತಿಯ ಅಧ್ಯಕ್ಷನಾಗಿ ವರದಿ ಕೊಟ್ಟಿದ್ದೇನೆ. ಸಮಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಸದಸ್ಯರು ಇದ್ದರು. ಬೆಳಗಾವಿಯ ಅಧಿವೇಶನದಲ್ಲಿ ಈ ವರದಿ ಕುರಿತು ಚರ್ಚೆ ನಡೆದು, ಸರಕಾರ ಅದಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಕೊಟ್ಟಿದೆ’ ಎಂದು ಹೇಳಿದರು.

ಸರಕಾರಕ್ಕೆ ವರದಿಯಲ್ಲಿ ನಮ್ಮ ಸಲಹೆಗಳು ಹಾಗೂ ಶಿಫಾರಸ್ಸುಗಳನ್ನು ಕೊಟ್ಟಿದ್ದೇವೆ. ಉನ್ನತ ಮಟ್ಟದ ತನಿಖೆಯಾಗಬೇಕು, ಯೋಜನೆಗೆ ಒಪ್ಪಂದಕ್ಕಿಂತ ಹೆಚ್ಚುವರಿಯಾಗಿ ನೀಡಿರುವ ವರದಿಯನ್ನು ಹಿಂಪಡೆದುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿದ್ದೇವೆ. ಸರಕಾರ ನಾವು ಕೊಟ್ಟಿರುವ ವರದಿ ಆಧಾರದಲ್ಲಿ ಕ್ರಮ ಜರುಗಿಸಿದರೆ ಸಾಕು ಎಂದು ಜಯಚಂದ್ರ ಹೇಳಿದರು.

ನೈಸ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಆರೋಪ ಪ್ರತ್ಯಾರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಕುರಿತು ನೀವು(ಮಾಧ್ಯಮದವರು) ಅವರಿಬ್ಬರನ್ನೆ ಕೇಳಿ ಎಂದು ನುಡಿದರು.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬುಧವಾರ ರಾಜ್ಯ ಸರಕಾರ ಸರ್ವಪಕ್ಷ ಸಭೆ ಕರೆದಿದೆ. ಅಲ್ಲಿ ಈ ವಿಚಾರದ ಕುರಿತು ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದೆ. ಕೇಂದ್ರ ಸರಕಾರದ ಬಜೆಟ್ ನಲ್ಲಿ 5 ಸಾವಿರ ಕೋಟಿ ರೂ.ಗಳನ್ನು ಈ ಯೋಜನೆಗೆ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಆದರೆ, ಈವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ಹೇಳಿದರು.

ಇದನ್ನು ಕೇಂದ್ರದ ಅಥವಾ ರಾಜ್ಯದ ಯೋಜನೆಯೆ ಆಗಲಿ ಕೇಂದ್ರ ಸರಕಾರ ಯಾವುದೇ ಮಾನದಂಡದಲ್ಲಿ ಗುರುತಿಸಲಿ ಕಗ್ಗಂಟಿಲ್ಲದೆ ಹಣ ಬಿಡುಗಡೆ ಮಾಡಲಿ. ಈ ಯೋಜನೆಗೆ ರಾಜ್ಯ ಸರಕಾರ 20 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಜಯಚಂದ್ರ ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ಬಳಿಕ ರಾಜ್ಯ ಸರಕಾರ ಕೇಂದ್ರ ಸರಕಾರದ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಅಳವಡಿಸಿಕೊಳ್ಳುವುದು ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಷ್ಟು ಹಣ ಬಿಡುಗಡೆ ಮಾಡಿದೆ. ರಾಜ್ಯ ಸರಕಾರ ಎಷ್ಟು ವೆಚ್ಚ ಮಾಡಿದೆ ಬಾಕಿ ಎಷ್ಟು ಬಿಡುಗಡೆ ಮಾಡಲಿದೆ ಎಂಬ ವಿವರಗಳನ್ನು ಮುಂದಿನ ದಿನಗಳಲ್ಲಿ ಮಾಹಿತಿ ಪಡೆದು ನೀಡುವುದಾಗಿ ಜಯಚಂದ್ರ ತಿಳಿಸಿದರು.

ಇದಕ್ಕೂ ಮುನ್ನ ಅಪರ ಮುಖ್ಯ ಕಾರ್ಯದರ್ಶಿ ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಮುಖ್ಯಸ್ಥೆ ಶಾಲಿನಿ ರಜನೀಶ್ ಜೊತೆ ಸಭೆ ಮಾಡಿ ಕೇಂದ್ರ ಸರಕಾರದ ಎದುರು ಬಾಕಿ ಇರುವ ರಾಜ್ಯದ ಯೋಜನೆಗಳ ಬಗ್ಗೆ ಅವರು ಚರ್ಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News