ಕೇಂದ್ರ ಸರಕಾರ ರಾಜ್ಯಕ್ಕೆ ನೀಡುತ್ತಿರುವ ತೆರಿಗೆ ಪಾಲು ಭಿಕ್ಷೆಯಂತಿದೆ: ಸಚಿವ ದಿನೇಶ್ ಗುಂಡೂರಾವ್

Update: 2024-01-07 15:20 GMT

ಬೆಂಗಳೂರು: ಕೇಂದ್ರದ ಮೋದಿ ಸರಕಾರದಿಂದ ನಮ್ಮ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ವಿರುದ್ಧದ ನಮ್ಮ ಕೂಗು ಅರಣ್ಯರೋಧನವಾಗಿದೆ. ಜಿಎಸ್ ಟಿ ಸಂಗ್ರಹದಲ್ಲಿ ನಮ್ಮ ರಾಜ್ಯ ದೇಶದಲ್ಲೆ ಎರಡನೆ ಸ್ಥಾನದಲ್ಲಿದೆ. ಆದರೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ನಮಗೆ ಕೇಂದ್ರ ಕೊಡುತ್ತಿರುವ ತೆರಿಗೆ ಪಾಲು ಭಿಕ್ಷೆಯಂತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ʼಎಕ್ಸ್ʼ ನಲ್ಲಿ ಪೋಸ್ಟ್ ಹಾಕಿರುವ ಅವರು, ಕರ್ನಾಟಕವೆಂದರೆ ಮೋದಿ ಸರಕಾರಕ್ಕೆ ಯಾಕೆ ಇಷ್ಟು ದ್ವೇಷ ಮತ್ತು ತಾತ್ಸಾರ ಎಂಬುದು ಅರ್ಥವೇ ಆಗುತ್ತಿಲ್ಲ. ರಾಜ್ಯದ ಜನ ಮೋದಿಯವರಿಗೆ ಮಾಡಿದ ಅನ್ಯಾಯವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದ ತೆರಿಗೆ ಅನ್ಯಾಯ ಇಂದು ನಿನ್ನೆಯದಲ್ಲ. ಜಿಎಸ್ ಟಿ ಕಾಯ್ದೆ ಜಾರಿಯಾದಾಗಿನಿಂದ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಲೇ ಇದೆ. ಕೇಂದ್ರದ ತೆರಿಗೆ ಅನ್ಯಾಯದ ವಿರುದ್ಧ ನಾವು ಅನೇಕ ಬಾರಿ ಆಕ್ಷೇಪ ಎತ್ತಿದ್ದೇವೆ. ಆದರೆ ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ? ಎಂದು ಅವರು ಕೇಳಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ‘ರಾಜಾಹುಲಿ', ‘ಸಾಮ್ರಾಟ' ಎಂಬ ಬಿರುದಾಂಕಿತ ನಾಯಕರಿದ್ದಾರೆ. ಈ ಅತಿರಥ ಮಹಾನಾಯಕರೆಲ್ಲಾ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಮೋದಿಯವರಿಗೆ ಮನವರಿಕೆ ಮಾಡಿಕೊಡಬಹುದಲ್ಲವೇ? ರಾಜ್ಯ ಬಿಜೆಪಿ ನಾಯಕರಿಗೆ ಕರ್ನಾಟಕಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಮೋದಿಯವರ ಬಳಿ ಮಾತಾಡಲು ಬೆನ್ನು ಮೂಳೆಯಿಲ್ಲವೇ? ಎಂದು ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.

ಕೇಂದ್ರ ಸರಕಾರ ಕೇವಲ ತೆರಿಗೆ ಹಂಚಿಕೆಯಲ್ಲಿ ಮಾತ್ರ ಕರ್ನಾಟಕಕ್ಕೆ ದ್ರೋಹ ಎಸಗುತ್ತಿಲ್ಲ. ಪ್ರತಿಯೊಂದರಲ್ಲೂ ಕರ್ನಾಟಕವನ್ನು ಸವತಿ ಮಗನಂತೆ ಕಾಣುತ್ತಿದೆ. ರಾಜ್ಯ ಭೀಕರ ಬರದಿಂದ ನರಳುತ್ತಿದೆ. ರೈತರು ಮಳೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ನಾವು ಬರಪರಿಹಾರಕ್ಕಾಗಿ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಇಲ್ಲಿಯವರೆಗೂ ಒಂದು ಕವಡೆಕಾಸಿನ ನೆರವೂ ಕೊಟ್ಟಿಲ್ಲ. ಎಷ್ಟು ದಿನ ಈ ಅನ್ಯಾಯ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News