ಬಸ್‍ನಲ್ಲಿ ಪ್ರಯಾಣಿಕರ ಲ್ಯಾಪ್‍ಟಾಪ್, ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಆ.21: ಆಂಧ್ರಪ್ರದೇಶ-ಬೆಂಗಳೂರು ಮಾರ್ಗದ ಬಸ್‍ನಲ್ಲಿ ಪ್ರಯಾಣಿಕರ ಲ್ಯಾಪ್‍ಟಾಪ್, ಮೊಬೈಲ್ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ವಸ್ತುಗಳನ್ನು ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಬಂಧಿತ ಆರೋಪಿಗಳು ಆಂಧ್ರಪ್ರದೇಶ ಮೂಲದವರಾಗಿದ್ದು, ಅವರಿಂದ 39 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶ-ಬೆಂಗಳೂರು, ಬೆಂಗಳೂರು-ಆಂಧ್ರಪ್ರದೇಶ ರಾತ್ರಿ ವೇಳೆ ಸಂಚರಿಸುವ ಈ ಬಸ್‍ಗಳಲ್ಲಿ ಕಳ್ಳರು ಹೊಂಚು ಹಾಕಿ ಪ್ರಯಾಣಿಕರು ಮಲಗಿದ್ದಾಗ ಅವರ ಲ್ಯಾಪ್‍ಟಾಪ್, ಮೊಬೈಲ್ ಸೇರಿದಂತೆ ಅಪಾರ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದರು.
ಈ ಆರೋಪಿಗಳು ರಿಸರ್ವ್ ಬಸ್‍ಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇವರು ಕೂಡ ಪ್ರಯಾಣಿಕರ ಸೋಗಿನಲ್ಲಿ ಬಸ್ ಬುಕ್ ಮಾಡಿ ಪ್ರಯಾಣ ಬೆಳೆಸುತ್ತಿದ್ದರು. ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.