ಬಂಧಿತ ಕರಸೇವಕನ ವಿರುದ್ಧ 16 ಪ್ರಕರಣಗಳಿವೆ: ಗೃಹ ಸಚಿವ ಜಿ.ಪರಮೇಶ್ವರ್

Update: 2024-01-03 14:12 GMT

ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಂಧಿತನಾದ ವ್ಯಕ್ತಿ ಕರಸೇವಕ ಎಂಬುದು ಗೊತ್ತಿಲ್ಲ. ಆದರೆ, ಆತನ ವಿರುದ್ಧ 16 ಪ್ರಕರಣಗಳಿದ್ದು, ಕೆಲವು ಪ್ರಕರಣಗಳು ವಿಲೇವಾರಿಯಾಗಿಲ್ಲ. ವಿಲೇವಾರಿಯಾಗದೇ ಇರುವ ಪ್ರಕರಣಗಳಲ್ಲಿ ಬಂಧಿಸಲಾಗಿದೆ ಎಂದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಪ್ರಕರಣಗಳ ವಿಲೇವಾರಿ ವಿಚಾರವನ್ನೆ ರಾಜಕೀಯಗೊಳಿಸಲಾಗಿದೆ. ಬಿಜೆಪಿಯವರು ಇಲ್ಲದ ವಿಚಾರವನ್ನು ರಾಜಕೀಯಕ್ಕೆ ತಳಕು ಹಾಕುತ್ತಿದ್ದು, ಅವರಿಗೆ ಶೋಭೆ ತರುವುದಿಲ್ಲ. ಅಲ್ಲದೆ, ಬಿಜೆಪಿ ನಾಯಕರು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಸಹಕಾರ ನೀಡುತ್ತಿರುವ ಕಾರಣವೇನು ಎಂದು ಪ್ರಶ್ನಿಸಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸುತ್ತಿದ್ದಾರೆ ಎನ್ನುವ ಮಾತು ತಪ್ಪು ಕಲ್ಪನೆ. ಹುಬ್ಬಳ್ಳಿಯಲ್ಲಿ ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡುವಾಗ ಈ ಪ್ರಕರಣವು ಬಂದಿದೆ. ನಾವು ಯಾರನ್ನು ಗುರಿ ಮಾಡಿಲ್ಲ ಎಂದ ಅವರು, ನಮ್ಮನ್ನು ಪ್ರಶ್ನಿಸುವ ಬಿಜೆಪಿಯವರು 2008ರಲ್ಲಿಯೂ ಸಹ ಅವರೇ ಅಧಿಕಾರದಲ್ಲಿದ್ದರು. ಈ ಹಿಂದೆಯೂ ಅವರೇ ಅಧಿಕಾರದಲ್ಲಿದ್ದರು. ಆಗ ಪ್ರಕರಣವನ್ನು ತೆಗೆದು ಹಾಕಬಹುದು ಅಥವಾ ಖುಲಾಸೆ ಮಾಡಬಹುದು. ಯಾಕೆ ಮಾಡಲಿಲ್ಲ ಎಂದರು.

ಹುಬ್ಬಳ್ಳಿಯಲ್ಲಿ 26 ಪ್ರಕರಣಗಳಲ್ಲಿ 36 ಮಂದಿಯನ್ನು ಬಂಧಿಸಲಾಗಿದೆ. ಆ ಪ್ರಕರಣಗಳಲ್ಲಿ ಯಾರು ಹಿಂದೂಗಳಿಲ್ಲವೇ? ಅವರ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಬಂಧಿತನಷ್ಟೇ ಹಿಂದೂ ವ್ಯಕ್ತಿಯೇ? ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಷಯಗಳೇ ಇಲ್ಲ. ಆರೋಪ ಮಾಡಲು ಇಲ್ಲದ ವಿಷಯವನ್ನು ಕೆದಕುತ್ತಿದ್ದಾರೆ ಎಂದು ಅವರು ಹರಿಹಾಯ್ದರು.

ಮುಂದಿನ ಚುನಾವಣೆಯಲ್ಲಿ ಜನರು ಪಾಠ ಕಲಿಸುತ್ತಾರೆ ಎಂದು ವಿಪಕ್ಷದವರು ಹೇಳುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಪಾಠ ಕಲಿಸುತ್ತಾರೆ. ಜನಸಮುದಾಯ ತೀರ್ಮಾನ ಮಾಡುವಾಗ ಎಲ್ಲರಿಗೂ ಪಾಠವಾಗುತ್ತದೆ. ರಾಜ್ಯದಲ್ಲಿ ಬಿಜೆಪಿಯವರಿಗೆ ಪಾಠ ಕಲಿಸಿಲ್ಲವೇ? ನಮಗೆ 136 ಸ್ಥಾನಗಳನ್ನು ಗೆಲ್ಲಿಸಿಕೊಟ್ಟು ಜನರು ಅವರಿಗೆ ಪಾಠ ಕಲಿಸಿದ್ದಾರಲ್ಲ ಎಂದು ಅವರು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News