ಸತೀಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

Update: 2023-10-19 17:14 GMT

Photo Credit- Twitter@laxmi_hebbalkar  

ಬೆಂಗಳೂರು, ಅ.19: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೆ ಭಿನ್ನಾಭಿಪ್ರಾಯ ಇಲ್ಲ, ಜಿಲ್ಲೆಯಲ್ಲಿ ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಹಳ ಒಳ್ಳೆ ಖಾತೆ ಕೊಟ್ಟಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ವಹಿಸಿದ್ದಾರೆ. ಸತೀಶ್ ಜಾರಕಿಹೊಳಿ ಆರು ಬಾರಿ ಶಾಸಕರು, ನಾನು ಎರಡು ಬಾರಿ ಶಾಸಕಿಯಾಗಿ, ಮೊದಲ ಬಾರಿ ಸಚಿವೆ ಆಗಿರುವೆ ಎಂದರು.

ಸತೀಶಣ್ಣ ಬಹಳ ಅನುಭವ ಇರುವವರು, ಅವರ ನೇತೃತ್ವದಲ್ಲಿ ನಾವೆಲ್ಲ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಗೆ ಯಾವುದೆ ಅಧಿಕಾರಿಯನ್ನು ಸತೀಶ್ ಜಾರಕಿಹೊಳಿ ಹಾಕಿದಾಗ ನಾನು ಒಪ್ಪಿಗೆ ನೀಡುತ್ತೇನೆ. ನಾನು ಯಾವುದೇ ಅಧಿಕಾರಿ ಹಾಕಿದಾಗ ಅವರು ಒಪ್ಪಿಗೆ ಸೂಚಿಸಿತ್ತಾರೆ. ಅದೆ ನಮ್ಮಲ್ಲಿರುವ ಹೊಂದಾಣಿಕೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿಯವರ ವಿಧಾನಪರಿಷತ್ ಚುನಾವಣೆಯಿಂದ ಹಿಡಿದು ಇಲ್ಲಿ ತನಕ ಒಂದೆ ಒಂದು ವಿಚಾರದಲ್ಲೂ ಸತೀಶ್ ಅವರ ಜೊತೆ ಭಿನ್ನಾಭಿಪ್ರಾಯಗಳು ಬಂದಿಲ್ಲ. ನಾನು ಯಾವುದಾದರೂ ಹಸ್ತಕ್ಷೇಪ ಮಾಡಿದ್ದೀನಾ? ಜಿಲ್ಲಾಡಳಿತದಲ್ಲೇನಾದ್ರೂ ನನ್ನಿಂದ ತೊಂದರೆ ಆಗ್ತಿದೆಯಾ ಅಂತ ಮತ್ತೊಮ್ಮೆ ಸಚಿವರನ್ನೆ ಕೇಳಿ ಎಂದು ಅವರು ತಿಳಿಸಿದರು.

ಬೆಳಗಾವಿ ರಾಜಕೀಯ ವಿಷಯಕ್ಕೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರನ್ನು ಯಾಕೆ ಎಳೆದು ತರ್ತೀರಾ ಎಂದು ಮಾಧ್ಯಮದವರನ್ನ ಪ್ರಶ್ನಿಸಿದ ಅವರು, ಅಧ್ಯಕ್ಷರು ಇಡೀ ರಾಜ್ಯ ಸುತ್ತಾಡಿ 135 ಶಾಸಕರು ಗೆಲ್ಲುವುದಕ್ಕೆ ತಮ್ಮದೇ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು.

ಮೊಮ್ಮಗಳ ನಾಮಕರಣವಿತ್ತು: ನಿನ್ನೆ ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಸ್ವಾಗತಕ್ಕೆ ಜಿಲ್ಲೆಯ ಶಾಸಕರು ಹೋಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಮುಜುಗರ ಅನ್ನೋ ಶಬ್ದ ರಾಜಕಾರಣದಲ್ಲಿ ಇಲ್ಲ. ಅದರ ಹೊರತಾಗಿ ನಾವು ರಾಜಕಾರಣ ಮಾಡಬೇಕಾಗುತ್ತದೆ ಎಂದರು.

ಒಂದು ತಿಂಗಳು ಮೊದಲೆ ನನ್ನ ಮೊಮ್ಮಗಳ ನಾಮಕರಣ ನಿಗದಿಯಾಗಿತ್ತು. ಹೀಗಾಗಿ ನಾನು ಭದ್ರಾವತಿಗೆ ಹೋದೆ. ಉಸ್ತುವಾರಿ ಸಚಿವರೂ ಮೊದಲೇ ತಿಳಿಸಿದ್ದರು, ಅವರು ಬೆಂಗಳೂರಲ್ಲೆ ಇದ್ದರು. ದಸರಾ ಹಬ್ಬ, ವಿವಿಧ ಕಾರಣಗಳಿಂದ ಇತರ ಶಾಸಕರು ಹೋಗಿರಲಿಲ್ಲ. ನಾನು ಅಧ್ಯಕ್ಷರಿಗೆ ಮುಂಚಿತವಾಗಿ ಗಮನಕ್ಕೆ ತಂದಿದ್ದೆ ಎಂದು ಅವರು ಹೇಳಿದರು.

ಡಿಕೆಶಿ ಸಮರ್ಥರಿದ್ದಾರೆ: ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಕೆ.ಶಿವಕುಮಾರ್ ಸಮರ್ಥರಿದ್ದಾರೆ. ಯಾವುದೆ ಕಾನೂನು ಹೋರಾಟವಾದರೂ ಸಮರ್ಥವಾಗಿ ಎದುರಿಸುತ್ತಾರೆ. ಎಲ್ಲವನ್ನೂ ನಿಭಾಯಿಸುತ್ತಾರೆ. ಸಂವಿಧಾನ ಕಾನೂನಿನ ಬಗ್ಗೆ ಗೌರವವಿದೆ. ಸಮರ್ಥವಾಗಿ ನಿಭಾಯಿಸಿ ಜಯಶಾಲಿಯಾಗಿ ಹೊರಬರುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News