ಕಾಂಗ್ರೆಸ್ ಸರಕಾರ ಬಂದ ಬಳಿಕ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿಲ್ಲ : ವಿಜಯೇಂದ್ರ
ಬೆಂಗಳೂರು : "ಕರ್ನಾಟಕದಲ್ಲಿ ಹಿಂದೆಂದೂ ಕಂಡು ಕೇಳರಿಯದ ಕೆಟ್ಟ ಸರಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಇದರ ಪರಿಣಾಮವಾಗಿ ಆಡಳಿತ ಪಕ್ಷದ ಶಾಸಕರೇ ತಮ್ಮ ಆಡಳಿತವನ್ನು ಟೀಕಿಸುತ್ತಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು “ಸಂಘಟನಾ ಪರ್ವ” ರಾಜ್ಯ ಮಟ್ಟದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬರ- ಭೀಕರ ನೆರೆ ಸಂಕಷ್ಟವಿದ್ದರೂ ಸರಕಾರದ ಸ್ಪಂದನೆ ಶೂನ್ಯವಾಗಿದೆ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು 3 ಉಪ ಚುನಾವಣೆಯತ್ತ ಮುಖ ಮಾಡಿದೆ. 10- 10 ಸಚಿವರನ್ನು ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಜವಾಬ್ದಾರಿ ನೀಡಿದ್ದಾರೆ. ಶಾಸಕರನ್ನೂ ನಿಯೋಜಿಸಿದ್ದಾರೆ ಎಂದರು.
ಹಣ, ಹೆಂಡ ಹಂಚಿ ಹೇಗಾದರೂ ಮಾಡಿ ಉಪ ಚುನಾವಣೆ ಗೆಲ್ಲಲು ಸೂಚಿಸಲಾಗಿದೆ. ರೈತ ವಿರೋಧಿ, ಅಭಿವೃದ್ಧಿ ವಿರೋಧಿ, ಜನವಿರೋಧಿ, ಪರಿಶಿಷ್ಟ ಸಮುದಾಯಗಳ ವಿರೋಧಿ ಸರಕಾರ ಇದು. ಈ ದುಷ್ಟ ಸರಕಾರ, ಭ್ರಷ್ಟ ಸಿಎಂ ವಿರುದ್ಧ ಜನಾಕ್ರೋಶ ತೀವ್ರವಾಗಿದೆ. 3 ಉಪ ಚುನಾವಣೆಗಳಲ್ಲಿ ಶಿಗ್ಗಾಂವಿ, ಸಂಡೂರಿನಲ್ಲಿ ಬಿಜೆಪಿ ಗೆದ್ದೇ ಗೆಲ್ಲಲಿದೆ. ಚನ್ನಪಟ್ಟಣದಲ್ಲಿ ಪಕ್ಷದ ಸ್ಥಾನಮಾನ ಪಡೆದಿದ್ದ ಮುಖಂಡ ಬೇರೆ ಪಕ್ಷಕ್ಕೆ ಹೋಗಿದ್ದು, ಅಲ್ಲಿನ ಜನತೆ, ಪ್ರಜ್ಞಾವಂತ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ನುಡಿದರು.
65 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸಲಾಗಿದೆ:
ಪ್ರಧಾನಿ ನರೇಂದ್ರ ಮೋದಿಯವರು ಸೆ.2ರಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. 40-45 ದಿನಗಳಲ್ಲಿ ದೇಶದಲ್ಲಿ 10 ಕೋಟಿ ಸದಸ್ಯರನ್ನು ನೋಂದಾಯಿಸಲಾಗಿದೆ. ಕರ್ನಾಟಕದಲ್ಲಿ 65 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ರಾಜ್ಯದ 58 ಸಾವಿರ ಬೂತ್‍ಗಳಲ್ಲಿ ಸದಸ್ಯತ್ವ ನೋಂದಣಿ ಆಗಿದೆ. ಮುಂದಿನ ಹಂತದಲ್ಲಿ ಪಕ್ಷದ ಸಮಿತಿಗಳ ರಚನೆ ಮೊದಲಾದ ಸಂಘಟನಾ ಕಾರ್ಯ ನಡೆಯಲಿದೆ ಎಂದು ವಿವರಿಸಿದರು. ಬೇರೆ ಯಾವುದೇ ರಾಜಕೀಯ ಪಕ್ಷಗಳಲ್ಲಿ ಇಷ್ಟೊಂದು ವ್ಯವಸ್ಥಿತ, ಕ್ರಮಬದ್ಧವಾದ ಸಂಘಟನಾತ್ಮಕ ಚಿಂತನೆ ಇಲ್ಲ ಎಂದು ತಿಳಿಸಿದರು.