‘ಹೊಸ ಕ್ರಿಮಿನಲ್ ಕಾನೂನು’ಗಳಿಗೆ ತಿದ್ದುಪಡಿ ತರಲು ಚಿಂತನೆ : ಸಚಿವ ಎಚ್.ಕೆ.ಪಾಟೀಲ್

Update: 2024-07-01 14:23 GMT

ಬೆಂಗಳೂರು : ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಸೋಮವಾರದಿಂದ ಜಾರಿಗೆ ಬರುತ್ತಿವೆ. ಈ ಮೂರು ಕಾನೂನುಗಳಿಗೆ ಅಗತ್ಯ ತಿದ್ದುಪಡಿ ತರಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಐಪಿಸಿ, ಸಿಆರ್ ಪಿಸಿ ಹಾಗೂ ದಿ ಇಂಡಿಯನ್ ಎವಿಡೆನ್ಸ್ ಕಾನೂನುಗಳು ನಮ್ಮ ದೇಶದ ‘ತಾಯಿ ಕಾನೂನು’ಗಳಂತೆ. ಸಂವಿಧಾನದ ತಿದ್ದುಪಡಿ ಮಹತ್ವವನ್ನು ಇವುಗಳಿಗೆ ಕೊಡಲಾಗುತ್ತದೆ. ಈ ಕಾನೂನು ಜಾರಿ ಸಂದರ್ಭದಲ್ಲಿ ಎಲ್ಲ ಎಚ್ಚರಿಕೆ ಕೈಗೊಳ್ಳಬೇಕು ಎಂದು ಹೇಳಿದರು.

ಕಾನೂನು ಮಾಡುವ ಸರಕಾರವು, ತನ್ನ ಅಧಿಕಾರ ಅವಧಿಯಲ್ಲಿ ಅದನ್ನು ಜಾರಿ ಮಾಡುವ ನೈತಿಕ ಹಕ್ಕನ್ನು ಹೊಂದಿರುತ್ತದೆ. ಆದರೆ, ತನ್ನ ಅಧಿಕಾರ ಅವಧಿ ಮುಗಿದ ಬಳಿಕ ಮುಂದಿನ ಸರಕಾರ ಕಾನೂನು ಜಾರಿಗೆ ತರುವಂತೆ ಮಾಡುವುದು ಅನೈತಿಕ ಹಾಗೂ ರಾಜಕೀಯವಾಗಿ ಅಸಂಬದ್ಧ ಕ್ರಮವಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಕಾನೂನುಗಳನ್ನು ಅನುಷ್ಠಾನಕ್ಕೆ ತರಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಮತ್ತು ಹಿಂದಿನ ಸರಕಾರ ನಿರ್ಣಯಿಸಿದ ದಿನಾಂಕದಂದೇ ಜಾರಿಗೆ ತರಬೇಕೆ ಎಂಬ ಬಗ್ಗೆ ಕೇಂದ್ರದ ಹೊಸ ಸರಕಾರದ ಸಚಿವ ಸಂಪುಟದಲ್ಲಿ ಚರ್ಚೆ ಆಗದೇ ಏಕಪಕ್ಷೀಯವಾಗಿ ಕೈಗೊಂಡ ನಿರ್ಣಯವು ಕಾನೂನಾತ್ಮಕ ಲೋಪವಾಗಿದೆ ಎಂದು ಅವರು ತಿಳಿಸಿದರು.

ಹಿಂದಿನ ಕೇಂದ್ರ ಸರಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದ ಅಮಿತ್ ಶಾ, 2023ರ ಆ.23ರಂದು ಮುಖ್ಯಮಂತ್ರಿಗೆ ಪತ್ರ ಬರೆದು ಈ ಕಾನೂನುಗಳಿಗೆ ಸಂಬಂಧಿಸಿದಂತೆ ನಮ್ಮ ರಾಜ್ಯದ ಸಲಹೆ, ಸೂಚನೆಗಳನ್ನು ನೀಡುವಂತೆ ಪತ್ರ ಬರೆದಿದ್ದರು. ಅದರಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆ.5ರಂದು ನನಗೆ ಪತ್ರ ಬರೆದು ರಾಜ್ಯದ ಸಲಹೆ, ಸೂಚನೆಗಳನ್ನು ನೀಡಲು ತಜ್ಞರ ಸಮಿತಿ ರಚನೆ ಮಾಡಿ, ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಿದ್ದರು ಎಂದು ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.

ಅದರಂತೆ, ಅ.17ರಂದು ನಾನು ಮುಖ್ಯಮಂತ್ರಿಗೆ ಪತ್ರ ಬರೆದು, ತಜ್ಞರ ಸಮಿತಿ ನೀಡಿರುವ ವರದಿ ಹಾಗೂ ನನ್ನ ಅಭಿಪ್ರಾಯಗಳನ್ನು ಕಳುಹಿಸಿಕೊಟ್ಟಿದ್ದೆ. ಅ.26ರಂದು ಮುಖ್ಯಮಂತ್ರಿ, ಅಮಿತ್ ಶಾ ಅವರಿಗೆ ಸುದೀರ್ಘ ಪತ್ರ ಬರೆದು 23 ಸಲಹೆಗಳುಳ್ಳ ತಜ್ಞರ ವರದಿಯನ್ನು ಕಳುಹಿಸಿಕೊಟ್ಟಿದ್ದರು ಎಂದು ಅವರು ಹೇಳಿದರು.

ಆದರೆ, ಕೇಂದ್ರ ಸರಕಾರ ನಮ್ಮ ಯಾವ ಸಲಹೆ, ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸದೆ, ನಿರ್ಲಕ್ಷ್ಯಿಸಿದರು. ಅಲ್ಲದೇ. ಅವರು ಮೊದಲೆ ಸಿದ್ಧಪಡಿಸಿದ್ದ ಮಸೂದೆಯನ್ನೆ ಯಥಾವತ್ತಾಗಿ ಜಾರಿ ಮಾಡಿದರು. ಈ ಹೊಸ ಕಾನೂನಿನಲ್ಲಿ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು ಇವೆ. ಜೊತೆಗೆ ಗೊಂದಲ ಮೂಡಿಸುವ ತಿದ್ದುಪಡಿಗಳು ಇವೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಜನಾಭಿಪ್ರಾಯ ನಿರ್ಲಕ್ಷ್ಯ ಮಾಡಿ, ವಕೀಲರ ಅಭಿಪ್ರಾಯ ನಿರ್ಲಕ್ಷ್ಯ ಮಾಡಿ ಕಾನೂನು ಮಾಡಿದ್ದಾರೆ. ಹೀಗಾಗಿ ಈ ಮೂರು ಕಾನೂನುಗಳನ್ನು ರಾಜ್ಯ ಸರಕಾರ ತಾತ್ವಿಕವಾಗಿ ವಿರೋಧ ಮಾಡುತ್ತದೆ. ಅಲ್ಲದೇ, ಸಂವಿಧಾನ ಅನುಚ್ಛೇದ 7, 3ನೇ ಪಟ್ಟಿಯಲ್ಲಿರುವ ಅಧಿಕಾರ ಬಳಸಿ ಕಾನೂನುಗಳನ್ನು ರಾಜ್ಯಕ್ಕೆ ಅಗತ್ಯವಿರುವಂತೆ ತಿದ್ದುಪಡಿ ಮಾಡಲು ರಾಜ್ಯ ಸರಕಾರಕ್ಕೆ ಇರುವ ಅಧಿಕಾರ ಬಳಸಿಕೊಳ್ಳುತ್ತೇವೆ ಎಂದು ಅವರು ವಿವರಿಸಿದರು.

ಮುಖ್ಯಮಂತ್ರಿ ಕೇಂದ್ರಕ್ಕೆ ಕಳುಹಿಸಿರುವ ಪತ್ರ ಹಾಗೂ ನಮ್ಮ ರಾಜ್ಯದ ವರದಿಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ, ತಿದ್ದುಪಡಿಗಳನ್ನು ತಂದು ಈ ಕಾನೂನುಗಳನ್ನು ತಿದ್ದುಪಡಿ ಮಾಡಬೇಕು. ಅಲ್ಲಿಯವರೆಗೂ ಈ ಕಾನೂನು ಜಾರಿಗೊಳಿಸುವುದನ್ನು ತಡೆಹಿಡಿಯಬೇಕು ಎಂಬುದು ನಮ್ಮ ಆಗ್ರಹ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಸರಕಾರದ ಕ್ರಮಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುವುದು ಈ ಕಾನೂನಿನಡಿಯಲ್ಲಿ ಅಪರಾಧವಾಗಿದೆ. ಆದರೆ, ಆತ್ಮಹತ್ಯೆ ಮಾಡುವುದು ಅಪರಾಧ ಅಲ್ಲ. ಪ್ರಜಾಸತ್ತಾತ್ಮಕವಾದ ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶ ಕೇಂದ್ರ ಸರಕಾರದ್ದು. ರಾಷ್ಟ್ರಪಿತ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಳಿಗೆ ಅಪಮಾನ, ತಿರಸ್ಕಾರ ಮಾಡುವುದನ್ನು ರಾಷ್ಟ್ರೀಯ ಐಕ್ಯತೆಯ ಮೇಲೆ ಪರಿಣಾಮಬೀರುವ ಅಪರಾಧಗಳೆಂದು ಪರಿಗಣಿಸುವಂತೆ ನಾವು ಮಾಡಿದ ಮನವಿಯನ್ನು ಕೇಂದ್ರ ಸರಕಾರ ಪರಿಗಣಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಂಘಟಿತ ಅಪರಾಧ’ ಎಂಬ ಹೊಸ ಅಪರಾಧವನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ಈ ಅಪರಾಧದ ವ್ಯಾಖ್ಯೆ ಅಸ್ಪಷ್ಟವಾಗಿದೆ ಮತ್ತು ಅಸಂಬದ್ಧವಾಗಿದೆ. ಇಂತಹ ಅಸ್ಪಷ್ಟ ಮತ್ತು ಪರಿಭಾವಿತ ವ್ಯಾಖ್ಯಾನಗಳನ್ನು ಆಧರಿಸಿ ವ್ಯಕ್ತಿಗಳ ಮೇಲೆ ಮೊಕದ್ದಮೆ ಹೂಡಲು ತನಿಖಾ ಸಂಸ್ಥೆಗಳಿಗೆ ಏಕಪಕ್ಷೀಯ ಮತ್ತು ವಿವೇಚನಾಧಿಕಾರವನ್ನು ನೀಡಲಾಗಿದೆ ಎಂದು ಅವರು ಟೀಕಿಸಿದರು.

ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಪರಾಧಗಳಿಗೆ ಕೇವಲ 3 ವರ್ಷ ಜೈಲು ಹಾಗೂ ದಂಡಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೈಬರ್ ಅಪರಾಧ, ಹ್ಯಾಕಿಂಗ್, ಆರ್ಥಿಕ ಅಪರಾಧ, ಅಣ್ವಸ್ತ್ರ ಗೌಪ್ಯತೆ ಹಾಗೂ ತಂತ್ರಜ್ಞಾನ ಮೂಲಕ ವಿಧ್ವಂಸಕ ಕೃತ್ಯ ಎಸಗುವ ಅಪರಾಧಗಳಿಗೆ ಪ್ರತ್ಯೇಕ ಅಧ್ಯಾಯದ ಮೂಲಕ ಕ್ರಮಕ್ಕೆ ತಿದ್ದುಪಡಿ ಮಾಡಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಮೃತ ದೇಹದ ಮೇಲೆ ಎಸಗಲಾಗುವ ಅತ್ಯಾಚಾರ ಮತ್ತು ಮೃತ ವ್ಯಕ್ತಿಗೆ ತೋರುವ ಅಗೌರವಗಳನ್ನು ಅಪರಾಧಿಕರಣಗೊಳಿಸುವ ನಿಟ್ಟಿನಲ್ಲಿ ತಿದ್ದುಪಡಿ ಮಾಡುತ್ತೇವೆ. ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಕಾಯ್ದೆ ಅಡಿಯಲ್ಲಿ ಪೊಲೀಸ್ ಕಸ್ಟಡಿ ಅವಧಿಯನ್ನು 90 ದಿನಗಳವರೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಆದುದರಿಂದ, ಇದನ್ನು ಸೂಕ್ತವಾಗಿ ಅತ್ಯಂತ ಕಡಿಮೆ ಮತ್ತು ಮಿತವಾದ ಸಮಯಕ್ಕೆ ಕಡಿತಗೊಳಿಸಲು ತಿದ್ದುಪಡಿ ತರಲಾಗುವುದು ಎಂದು ಅವರು ತಿಳಿಸಿದರು.

ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಆಸ್ತಿ-ಪಾಸ್ತಿ ಜಪ್ತಿ ಮಾಡಲು ಪೊಲೀಸರಿಗೆ ನೀಡಲಾಗಿರುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡಲು ತಿದ್ದುಪಡಿ ಮಾಡಲಾಗುವುದು ಎಚ್.ಕೆ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News