ಸರಕಾರಿ ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಪದ್ಧತಿ ನಿಲ್ಲಿಸಲು ಚಿಂತನೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-10-21 10:19 GMT

ಬೆಂಗಳೂರು: “ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಪದ್ಧತಿ ನಿಲ್ಲಿಸಿ, ಪರಿಣಿತರ ಸಮಿತಿ ಮೂಲಕ ಆಯ್ಕೆ ಮಾಡುವ ವಿಧಾನದ ಬಗ್ಗೆ ಚಿಂತನೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ನಗರದ ಗಾಂಧಿಭವನದಲ್ಲಿ ಶವಿವಾರ ನಡೆದ ಸಂಸ್ಕೃತಿ ಸಂಗಮ- 23 ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

“ಪ್ರಶಸ್ತಿ ಆಯ್ಕೆಗೆ ಹೊಸ ವ್ಯವಸ್ಥೆ ಜಾರಿಗೆ ತರಬೇಕಿದೆ. ಯಾವುದೇ ಪ್ರಶಸ್ತಿಯಾದರೂ ಅದಕ್ಕೆ ಗೌರವ ಇರಬೇಕು. ಯಾವುದೇ ಒತ್ತಡಕ್ಕೆ ಒಳಗಾಗಿ ಪ್ರಶಸ್ತಿ ನೀಡಬಾರದು. ರಾಜ್ಯೋತ್ಸವದಷ್ಟೇ ವರ್ಷದ ಸಂಖ್ಯೆಯ ಪ್ರಶಸ್ತಿ ನೀಡುವ ಆಲೋಚನೆಯಿದೆ” ಎಂದು ತಿಳಿಸಿದರು.

“ನಾವೀಗ ಒಂದು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ ಅರ್ಜಿ ಕರೆದಿದ್ದೆವು. ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜಾತಿ, ಜಿಲ್ಲಾವಾರು ಮತ್ತು ಎಲ್ಲಾ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು. ಎಲ್ಲವನ್ನು ಲೆಕ್ಕ ಹಾಕುವಾಗ, ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎನ್ನುವ ಸವಾಲು ನಮ್ಮ ಮುಂದಿದೆ” ಎಂದರು.

“ಪ್ರಸ್ತುತ ವರ್ಷದ ಪ್ರಶಸ್ತಿ ನೀಡಲು ಎಲ್ಲಾ ಕ್ಷೇತ್ರಗಳ 20-30 ತಜ್ಞರ ಸಮಿತಿ ಮಾಡಲಾಗಿದೆ. ಸರ್ಕಾರ ನೀಡುವ ಯಾವುದೇ ಪ್ರಶಸ್ತಿಯನ್ನು ಸಮಿತಿಯೇ ಪರಿಶೀಲನೆ ಮಾಡಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಹಿಂದೆ ಕೆಲವು ಸಲ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 200- 300 ಕ್ಕೆ ಮುಟ್ಟಿದ್ದಿದೆ” ಎಂದು ಹೇಳಿದರು.

“ಸರ್ಕಾರ ಮಾಡಲು ಆಗದೇ ಇರುವ ಕೆಲಸಗಳನ್ನು ಸಂಘ- ಸಂಸ್ಥೆಗಳು, ಮಠಗಳು ಮಾಡುತ್ತಿವೆ. ಅನೇಕ ಸಾಧಕರನ್ನು ಗುರುತಿಸಿ, ಸಮಾಜದ ಒಳಿತಿಗೆ ಕೆಲಸ ಮಾಡುತ್ತಿವೆ. ಇಲ್ಲಿ ನಾನೊಬ್ಬನೇ ಅಲ್ಲ, ನಮ್ಮ ಹಿರಿಯರನ್ನು ನೆನಪಿಸಿಕೊಳ್ಳಬೇಕು. ಅಧಿಕಾರ ಇರಲಿ, ಇಲ್ಲದಿರಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಿ. ಸೋಮಶೇಖರ್ ಅವರು ಪತ್ನಿಯೊಟ್ಟಿಗೆ ಸೇರಿ ಮಾಡುತ್ತಿದ್ದಾರೆ. ದೇವರು ವರ, ಶಾಪ ಏನನ್ನೂ ಕೊಡುವುದಿಲ್ಲ, ಕೇವಲ ಅವಕಾಶ ಕೊಡುತ್ತಾನೆ. ಈ ಅವಕಾಶವನ್ನು ಸಿ.ಸೋಮಶೇಖರ್ ಅವರು ಸಮಾಜಮುಖಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.

“ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಅದರಂತೆ ಸಿ. ಸೋಮಶೇಖರ್ ಅವರು ಜ್ಞಾನ ಭಂಡಾರದಲ್ಲಿ ಮುಳುಗೆದ್ದವರು. ಇವರಲ್ಲಿ ಸರಸ್ವತಿ ಮನೆ ಮಾಡಿದ್ದಾಳೆ. ಅವರಲ್ಲಿ ಇರುವ ಜ್ಞಾನವನ್ನು ಸಮಾಜಕ್ಕೆ ಮರಳಿ ನೀಡಬೇಕು ಎಂದು ಕೆಲಸ ಮಾಡುತ್ತಿದ್ದಾರೆ” ಎಂದರು.

ಸೋಮಶೇಖರ್ ಅವರು ಹಾಗೂ ನನ್ನ ಸಂಬಂಧ 30 ವರ್ಷಗಳದ್ದು. ನಾನು ಮಂತ್ರಿಯಾಗಿದ್ದೆ, ಅವರು ಅಧಿಕಾರಿಯಾಗಿದ್ದರು. ನಮ್ಮ ಜಿಲ್ಲೆಯವರು, ಅವರಿಗೆ ಅನೇಕ ಬಾರಿ ಹೇಳಿದ್ದೇನೆ, ನೀವು ನನ್ನೊಟ್ಟಿಗೆ ಇರಬೇಕು, ನಿಮ್ಮ ಜ್ಞಾನ ಭಂಡಾರವನ್ನು ನನ್ನ ಜೊತೆಗೆ ಹಂಚಿಕೊಂಡರೆ ನನ್ನಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು. ಅವರು ಯಾಕೋ ದೂರ ಹೋಗುತ್ತಿದ್ದಾರೆ. ಆದರೆ ಅವರ ಜೊತೆಗಿನ ಸ್ನೇಹ-ಸಂಬಂಧ ಉತ್ತಮವಾಗಿದೆ. ಇವರು ಹಣ ನೀಡಲಿಲ್ಲ ಎಂಬುದೊಂದು ಬಿಟ್ಟರೆ ಸರ್ಕಾರ ನೀಡುವಷ್ಟೇ ಅಚ್ಚುಕಟ್ಟಾಗಿ ಪ್ರಶಸ್ತಿ ನೀಡಿದರು” ಎಂದು ಶ್ಲಾಘಿಸಿದರು.

“ಡಾ. ನರಸಿಂಹಲು ವಡವಾಟಿ ಅವರು “ಕಲೆ ಎನ್ನುವುದು ಗಾಳಿಯಲ್ಲಿ ಇರುತ್ತದೆ” ಎಂದು ಹೇಳಿದರು. ಆಗ ನನಗೆ ಒಂದು ಮಾತು ನೆನಪಾಯಿತು. ಬಿದಿರಿಗೆ ನಾನು ಕೊಳಲಾಗಬಹುದು, ಆ ಕೊಳಲಿನಿಂದ ನಾದ ಹೊರಡಿಸಬಹುದು ಎಂದು ಗೊತ್ತಿರುವುದಿಲ್ಲ. ಕೃಷ್ಣ ಆ ಕೊಳಲನ್ನು ಹಿಡಿದುಕೊಂಡಾಗ, ನೋಡುವವರಿಗೂ ಗೊತ್ತಾಗುವುದಿಲ್ಲ. ಅದು ಬಿದಿರಿನ ಶಕ್ತಿ ಎಂದು. ಅದೇ ರೀತಿ ನಮ್ಮ ಸಾಹಿತ್ಯ, ಕಲೆ ಕ್ಷೇತ್ರದಲ್ಲಿ ಇರುವವರಿಗೆ ತಮ್ಮ ಶಕ್ತಿಯ ಬಗ್ಗೆ ಅರಿವು ಇರುವುದಿಲ್ಲ. ಮನುಷ್ಯ ಆನಂದಕ್ಕೆ, ನೆಮ್ಮದಿಗೆ ಬಡಿದಾಡುತ್ತಾನೆ. ಅದು ಸಂಗೀತ, ಸಾಹಿತ್ಯ, ಜನಪದ ಯಾವುದರಿಂದಲಾದರೂ ಸಿಗಬಹುದು. ಅದಕ್ಕೆ ಇಷ್ಟೆಲ್ಲಾ ಕಷ್ಟಪಡಬೇಕಾಗಿದೆ. ದೇವಸ್ಥಾನಕ್ಕೆ ಹೋಗುವುದು ಸಹ ನೆಮ್ಮದಿಗಾಗಿ” ಎಂದು ತಿಳಿಸಿದರು.

“ಸಂಸ್ಕೃತಿ ಸಂಗಮ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಕೃತಿಯನ್ನು ಹೇಗೆ ಅರ್ಥೈಸಬೇಕು, ಬಣ್ಣಿಸಬೇಕು ಎಂದು ಯೋಚನೆ ಮಾಡುತ್ತಿದ್ದೆ. ನಾನು ಕನಕಪುರದ ಕಡೆಯವನಾದ್ದರಿಂದ ಈ ಮಾಧ್ಯಮದವರು ʼಬಂಡೆʼ ಎಂದು ಕರೆದರು. ನಮ್ಮ ಕಡೆ ಈ ಬಂಡೆ ಕಲ್ಲುಗಳು ಹೆಚ್ಚು. ಈ ಬಂಡೆ ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ರೀತಿಯಾಗಿ ಕಾರ್ಯಕ್ರಮದಲ್ಲಿ ಸಂಸ್ಕೃತಿಯ ಸಂಗಮವಾಗಿದೆ” ಎಂದರು.

“ಹುಟ್ಟು ಆಕಸ್ಮಿಕವಾದದ್ದು, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎನ್ನುವುದು ಮುಖ್ಯ. ನಾವು ಸಾಧಿಸಿದ್ದನ್ನು ಬಿಟ್ಟು ಹೋಗುವ, ತೆಗೆದುಕೊಂಡು ಹೋಗುವ ಕಾಲವಿಲ್ಲ” ಎಂದು ನುಡಿದರು.

“ಅಲೆಗ್ಸಾಂಡರ್ ತಮ್ಮ ಗುರುಗಳಾದ ಅರಿಸ್ಟಾಟಲ್ ಅವರಿಗೆ ಹೇಳುತ್ತಾನೆ, “ನಾನು ಭಾರತವನ್ನು ವಶಪಡಿಸಿಕೊಳ್ಳಲು ಹೋಗುತ್ತಿದ್ದೇನೆ ಎಂದು. ನೀನು ಮರಳಿ ಬರುವೆಯಾ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಬರುವಾಗ ಐದು ವಸ್ತುಗಳನ್ನು ತೆಗೆದುಕೊಂಡು ಬಾ ಎಂದರು. ಭಗವದ್ಗೀತೆ, ರಾಮಾಯಣ, ಗಂಗಾಜಲ, ಕೃಷ್ಣನ ಕೊಳಲು ಮತ್ತು ಸಾಧು- ಸಂತರು ಅಥವಾ ತತ್ವಜ್ಞಾನಿಯನ್ನು ಕರೆದುಕೊಂಡು ಬಾ. ಆಗ ಇಡೀ ಭಾರತವನ್ನೇ ತಗೆದುಕೊಂಡು ಬಂದಂತೆ ಎಂದು ಹೇಳಿದರು.

ಭಾರತ ದೇಶದ ದೊಡ್ಡ ಆಸ್ತಿಯೇ ಸಂಸ್ಕೃತಿ. ನಾವೆಲ್ಲಾ ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಮಠ-ಮಾನ್ಯಗಳೇ ನಮ್ಮ ದೇಶದ ದೊಡ್ಡ ಆಸ್ತಿಗಳು. B ಜ್ಞಾನ ಭಂಡಾರದಲ್ಲಿ ತುಂಬಿರುವಂತಹ ಹಿರಿಯರು ಈ ನಾಡಿನಲ್ಲಿ ಇದ್ದಾರೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ ಪದುಮನಾಭನ ಪಾದ ಭಜನೆ ಪರಮಸುಖವಯ್ಯಾ ಎನ್ನುವ ಮಾತಿನಂತೆ ಅನೇಕ ಜ್ಞಾನಿಗಳನ್ನು ನೋಡುವ ಭಾಗ್ಯ ನನ್ನದಾಯಿತು” ಎಂದು ಅಭಿನಂದನೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News