ಮಾಡಾಳ್‍ಗೆ ಲಂಚ ನೀಡಿದವರನ್ನೂ ವಿಚಾರಣೆಗೆ ಒಳಪಡಿಸಿ: ಹೈಕೋರ್ಟ್

Update: 2023-07-02 17:53 GMT

ಬೆಂಗಳೂರು, ಜು.2: ಮಾಜಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಎಂ.ವಿ. ಪ್ರಶಾಂತ್ ಕುಮಾರ್ ವಿರುದ್ಧದ ಲಂಚ ಹಗರಣದ ಐವರು ಆರೋಪಿಗಳ ಮೇಲೆ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಲಂಚ ನೀಡುವವರನ್ನೂ ವಿಚಾರಣೆಗೆ ಒಳಪಡುವಂತೆ ಮಾಡುವ ಮೂಲಕ ಭ್ರಷ್ಟಾಚಾರದ ಹಾವಳಿಗೆ ಕಡಿವಾಣ ಹಾಕಬೇಕಿದೆ ಎಂದು ನುಡಿದಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ(ಕೆಎಸ್‍ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಕಾರ್ಯಾದೇಶ ಪಡೆಯಲು ಕೆಎಸ್‍ಡಿಎಲ್ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಕುಮಾರ್‍ಗೆ ಲಂಚ ನೀಡಲು ಮುಂದಾದ ಆರೋಪದ ಮೇಲೆ ತಮ್ಮ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದು ಕೋರಿ ಕರ್ನಾಟಕ ಆರೋಮಾ ಕಂಪೆನಿಯ ಮಾಲಕರಾದ ಕೈಲಾಶ್ ಎಸ್. ರಾಜ್, ವಿನಯ್ ಎಸ್. ರಾಜ್, ಚೇತನ್ ಮರ್ಲೇಚಾ, ಸಿಬ್ಬಂದಿ ಅಲ್ಬರ್ಟ್ ನಿಕೋಲಾಸ್ ಮತ್ತು ಗಂಗಾಧರ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಲಂಚ ಪಡೆಯುವವರನ್ನು ವಿಚಾರಣೆಗೆ ಒಳಪಡಿಸುವಂತೆ ಲಂಚ ನೀಡುವವರನ್ನೂ ವಿಚಾರಣೆಗೆ ಒಳಪಡುವಂತೆ ಮಾಡುವ ಮೂಲಕ ಭ್ರಷ್ಟಾಚಾರದ ಹಾವಳಿಗೆ ಕಡಿವಾಣ ಹಾಕಬೇಕಿದೆ ಎಂದು ಹೈಕೋರ್ಟ್ ನ್ಯಾಯಪೀಠವು ನುಡಿದಿದೆ.

ಈ ಐವರ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ನ್ಯಾಯಪೀಠವು ಲಂಚ ಪಡೆಯುವವರು ಮತ್ತು ಸ್ವೀಕರಿಸುವವರನ್ನು ಪ್ರಾಸಿಕ್ಯೂಷನ್‍ನ ಒಂದೇ ನೆಲೆಯಲ್ಲಿ ನಿಲ್ಲುವಂತೆ ಮಾಡಲು 2018ರ ಜು.26ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಅರ್ಜಿದಾರರ ವಿರುದ್ಧದ ಪ್ರಕರಣ ಕೈಬಿಟ್ಟರೆ ಕಾಯ್ದೆಗೆ ತಿದ್ದುಪಡಿ ಮಾಡಿದ ಉದ್ದೇಶವೇ ನಿರರ್ಥಕವಾಗಲಿದೆ ಎಂದು ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News