ʼಪಲ್ಲಕ್ಕಿ ಬಸ್ʼ ಎಂದು ಹೆಸರಿಟ್ಟವರಿಗೆ ಪ್ರಮಾಣಪತ್ರ ನೀಡಿ ಗೌರವಿಸಬೇಕು: ಡಿ.ಕೆ. ಶಿವಕುಮಾರ್

Update: 2023-10-07 08:22 GMT

ಬೆಂಗಳೂರು: ʼʼಈ ಹಿಂದೆ ಪಲ್ಲಕ್ಕಿಯನ್ನು ರಾಜ ಮಹಾರಾಜರನ್ನು ಹೊರಲು ಬಳಸಲಾಗುತ್ತಿತ್ತು, ಈಗ ನಮ್ಮ ಮಹಿಳೆಯರು ಹಾಗೂ ಪ್ರಯಾಣಿಕರನ್ನು ಕೆಎಸ್ಸಾರ್ಟಿಸಿಯ ಪಲ್ಲಕ್ಕಿ ಹೊರಲಿದೆ. ಈ ಬಸ್ ಗೆ ಪಲ್ಲಕ್ಕಿ ಎಂದು ಅತ್ಯುತ್ತಮ ಹೆಸರಿಟ್ಟವರಿಗೆ ಪ್ರಮಾಣಪತ್ರ ನೀಡಿ ಗೌರವಿಸಬೇಕುʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ವಿಧಾನಸೌಧದ ಮುಂಭಾಗ ಇಂದು ರಾಜ್ಯ ಸಾರಿಗೆಯ ಪಲ್ಲಕ್ಕಿ ಕ್ಲಾಸ್ ಬಸ್ ಗಳು ಸೇರಿದಂತೆ 100 ನೂತನ ಕರ್ನಾಟಕ ಸಾರಿಗೆ ಹಾಗೂ 40 ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್‌ಗಳಿಗೆ ಮುಖ್ಯಮಂತ್ರಿಗಳೊಂದಿಗೆ ಚಾಲನೆ ನೀಡಿ ಮಾತನಾಡಿದ ಅವರು,  ʼʼಇಂದು ಬೆಳಗ್ಗೆ ಈ ಕಾರ್ಯಕ್ರಮಕ್ಕೆ ಬರುವ ಮುನ್ನ ನನ್ನ ಪತ್ನಿಗೂ ಈ ಬಸ್ ವಿಚಾರ ತಿಳಿಸಿ ಮೈಸೂರಿಗೆ ಹೋಗುವಾಗ ಈ ಬಸ್ ನಲ್ಲಿ ಪ್ರಯಾಣ ಮಾಡಿ ನೋಡು ಎಂದು ಹೇಳಿ ಬಂದಿದ್ದೇನೆʼʼ ಎಂದು ತಿಳಿಸಿದರು. 

ʼʼಇಂದು ನಾವು ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ನಾವು ಗ್ಯಾರಂಟಿ ಯೋಜನೆ ಘೋಷಿಸಿದಾಗ ಅನೇಕರು ನಮ್ಮನ್ನು ಟೀಕಿಸಿದರು. ಬೇರೆ ರಾಜ್ಯದ ಮುಖ್ಯಮಂತ್ರಿಗಳು, “ನಿಮ್ಮಿಂದ ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ” ಎಂದು ನನ್ನನ್ನು ಕೇಳಿದ್ದರು. ಹೆಣ್ಣು ಕುಟುಂಬದ ಕಣ್ಣು, ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ನೀಡಿ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಮೊದಲು ಜಾರಿಗೆ ಬಂದಿದ್ದು ಶಕ್ತಿ ಯೋಜನೆ. ಈ ಯೋಜನೆಯಲ್ಲಿ ಈವರೆಗೂ ಸುಮಾರು 70.73 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆʼʼ ಎಂದು ಅವರು ವಿವರಿಸಿದರು. 

ʼʼನಾನು ದೆಹಲಿ ಸೇರಿದಂತೆ ಬೇರೆ ರಾಜ್ಯಗಳ ಸಾರಿಗೆ ಸಂಸ್ಥೆಗಳನ್ನು ಭೇಟಿ ಮಾಡಿದಾಗ ಅವರು ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್ ಗಳ ಫೋಟೋಗಳನ್ನೇ ಅವರು ಬಳಸುತ್ತಾರೆ. ನಮ್ಮ ಸಾರಿಗೆ ಸಂಸ್ಥೆಗಳು ದೇಶದಲ್ಲೇ ಅತ್ಯುತ್ತಮ ಸೇವೆ ನೀಡುತ್ತಿರುವ ಸಾರಿಗೆ ಸಂಸ್ಥೆಗಳಾಗಿವೆ. ಹೀಗಾಗಿ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಅಭಿನಂದನೆಗಳುʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ʼʼರಾಜ್ಯದ ಮಹಿಳೆರು ತಮ್ಮ ಕುಟುಂಬದವರನ್ನು ಬಸ್ ನಲ್ಲಿ ಕರೆದುಕೊಂಡು ಪ್ರಯಾಣ ಮಾಡಲಿ. ಇಂದು 100 ಕೆಎಸ್ಸಾರ್ಟಿಸಿ ಬಸ್ ಹಾಗೂ 40 ಎಸಿ ರಹಿತ ಸ್ಲೀಪರ್ ಬಸ್ ಗಳನ್ನು ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ಈ ಪಲ್ಲಕ್ಕಿ ಬಸ್ ನಮ್ಮ ಇತಿಹಾಸ ಪುಟಕ್ಕೆ ಸೇರಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಅವರ ತಂಡಕ್ಕೆ ಶುಭವಾಗಲಿ ಎಂದು ಹಾರೈಸುತ್ತೇನೆʼʼ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News