ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಟಿಕೆಟ್ ರಹಿತ ಪ್ರಯಾಣ: 5,71,286 ರೂ. ದಂಡ ವಸೂಲಿ
Update: 2024-02-12 14:03 GMT
ಬೆಂಗಳೂರು: ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 3,712 ಪ್ರಯಾಣಿಕರಿಂದ 5,71,286 ರೂ.ದಂಡ ವಸೂಲಿ ಮಾಡಲಾಗಿದೆ ಎಂದು ನಿಗಮ ತಿಳಿಸಿದೆ.
ಕೆಎಸ್ಸಾರ್ಟಿಸಿ ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ಜನವರಿ ತಿಂಗಳಲ್ಲಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 44,521 ವಾಹನಗಳನ್ನು ತನಿಖೆಗೊಳಪಡಿಸಿ 3,391 ಪ್ರಕರಣಗಳನ್ನು ಪತ್ತೆಹಚ್ಚಿದ್ದು, 3712 ಟಿಕೆಟ್ ರಹಿತ ಪ್ರಯಾಣಿಕರಿಂದ 5.71.286 ರೂ. ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.
ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 81,583 ರೂ.ಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದು, ತಪ್ಪಿತಸ್ಥರ ವಿರುದ್ಧ ಇಲಾಖೆಯಿಂದ ಸೂಕ್ತ ಕ್ರಮವನ್ನು ಜರುಗಿಸಲಾಗಿದೆ. ಆದುದರಿಂದ ಸಾರ್ವಜನಿಕ ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್, ಪಾಸ್ ಪಡೆದು ಪ್ರಯಾಣ ಮಾಡಬೇಕೆಂದು ನಿಗಮವು ಪ್ರಕಟನೆಯಲ್ಲಿ ಹೇಳಿದೆ.