ಹುಲಿ ಉಗುರು ಪ್ರಕರಣ; ಬಿಜೆಪಿ ನಾಯಕನ ಮನೆಯಲ್ಲಿ ಅರಣ್ಯಾಧಿಕಾರಿಗಳ ಶೋಧ
ವಿಜಯಪುರ: ಬಿಜೆಪಿ ನಾಯಕ ವಿಜುಗೌಡ ಪಾಟೀಲ ಪುತ್ರ ಹುಲಿ ಉಗುರು ಧರಿಸಿರುವ ಆರೋಪದಡಿ ವಿಜುಗೌಡ ಪಾಟೀಲ ವಿಜಯಪುರ ನಗರ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರ ಜಿಲ್ಲೆಯ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಪುತ್ರ ಶಾಶ್ವತಗೌಡ ಪಾಟೀಲ ಹುಲಿ ಉಗುರು ಧರಿಸಿರೋ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ನಿವಾಸಕ್ಕೆ ಜಿಲ್ಲಾ ಅರಣ್ಯಾಧಿಕಾರಿ ಶಿವಶರಣಯ್ಯ, ಸಹಾಯಕ ಅರಣ್ಯಾಧಿಕಾರಿ ಭಾಗ್ಯವಂತ ಮಸೂದೆ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಹಾಗೂ ಸಿಬ್ಬಂದಿಯಿಂದ ಬಿಜೆಪಿ ನಾಯಕ ವಿಜುಗೌಡ ಪಾಟೀಲ ನಿವಾಸಕ್ಕೆ ಭೇಟಿ ನಿಡೀ ಪರಿಶೀಲನೆ ನಡೆಸಿದರು.
ವಿಜುಗೌಡ ಪುತ್ರ ಶಾಶ್ವತಗೌಡ ಪಾಟೀಲ ಪೆಂಡೆಂಟ್ ನಲ್ಲಿ ಹುಲಿ ಉಗುರು ಹಾಕಿರೋ ಪೋಟೋ ವೈರಲ್ ಆಗಿದ್ದವು. ಶಾಶ್ವತಗೌಡ ಪಾಟೀಲ ಹುಲಿ ಉಗುರು ಹಾಕಿರೋ ಕುರಿತು ಪರಿಶೀಲನೆಗೆ ಅರಣ್ಯಾಧಿಕಾರಿಗಳು ವಿಜುಗೌಡರ ಮನೆಗೆ ಭೇಟಿ ನೀಡಿದ್ದಾರೆ.
ಶಾಶ್ವತಗೌಡ ಪಾಟೀಲ ಹಾಕಿಕೊಂಡಿರುವುದು ಅಸಲಿ ಹುಲಿ ಉಗುರೋ ನಕಲಿಯೋ ಎಂಬುದನ್ನು ಅರಣ್ಯಾಧಿಕಾರಿಗಳು ಪರೀಕ್ಷೆ ಮಾಡಲಿದ್ದಾರೆ. ಪರಿಶೀಲನೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.
ʼತಮ್ಮ ಪುತ್ರ ಧರಿಸಿದ್ದು ನಕಲಿ ಹುಲಿ ಉಗುರು. ಏಳು ವರ್ಷಗಳ ಹಿಂದೆ ಪೆಂಡೆಂಟ್ ನಲ್ಲಿ ನಕಲಿ ಹುಲಿ ಉಗುರು ಹಾಕಿಕೊಂಡಿದ್ದʼ ಎಂದು ಬಿಜೆಪಿ ನಾಯಕ ವಿಜುಗೌಡ ಪಾಟೀಲ ನಿನ್ನೆಯೇ ಸ್ಪಷ್ಟನೆ ನೀಡಿದ್ದರು.
ʼಅರಣ್ಯ ಇಲಾಖೆ ಅಧಿಕಾರಿಗಳು ಬೇಕಾದರೆ ತನಿಖೆ ಮಾಡಲಿʼ
ನಾವು ತನಿಖೆಗೆ ಸಿದ್ಧ, ಸಂಬಂಧಿಸಿದ ಅಧಿಕಾರಿಗಳು ಕೇಳಿದರೆ ಚೈನ್ ತೋರಿಸುತ್ತೇವೆ, ನಮಗೆ ಕಾನೂನಿನ ಅರಿವು ಇದೆ, ನಮ್ಮ ಕುಟುಂಬ ಕಾನೂನು ಪಾಲಿಸುತ್ತದೆ, ನಾನು ಚಿಲ್ಲರೇ ರಾಜಕಾರಣ ಮಾಡಲ್ಲ ಎಂದು ವಿಜುಗೌಡ ಪಾಟೀಲ ಹೇಳಿಕೆ ನೀಡಿದ್ದರು.
ನಮ್ಮ ಮಗನ ಪೋಟೋ ಇಟ್ಟುಕೊಂಡು ಕೆಲವರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ, ಅವರದ್ದು ನನ್ನ ಬಳಿ ಬಹಳ ಇದೆ, ಎಂದು ಹೆಸರು ಹೇಳದೆ ಪರೋಕ್ಷವಾಗಿ ಸಚಿವ ಎಂ ಬಿ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಸಚಿವ ಎಂ ಬಿ ಪಾಟೀಲ್ ವಿರುದ್ಧ ವಿಧಾನಸಭಾ ಚುನಾವಣೆಗಳಲ್ಲಿ ಮೂರು ಬಾರಿ ವಿಜುಗೌಡ ಪಾಟೀಲ ಸೋಲನ್ನು ಅನುಭವಿಸಿದ್ದಾರೆ.