ಹುಲಿ ಉಗುರು ಧರಿಸಿದ್ದ ಆರೋಪ: ನಟ ದರ್ಶನ್, ಜಗ್ಗೇಶ್ ಸೇರಿ ಹಲವರ ನಿವಾಸಗಳಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

Update: 2023-10-25 15:05 GMT

ದರ್ಶನ್ / ಜಗ್ಗೇಶ್ 

ಬೆಂಗಳೂರು: ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್, ನಟರಾದ ದರ್ಶನ್, ರಾಕ್‍ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ಉಪೇಂದ್ರ ಸೇರಿದಂತೆ ಗಣ್ಯ ವ್ಯಕ್ತಿಗಳೇ ‘ಹುಲಿ ಉಗುರು’ ಬಳಕೆ ಮಾಡುತ್ತಿರುವ ಆರೋಪ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸಂಬಂಧಿಸಿದವರ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡರು.

ಇದೇ ಪ್ರಕರಣದಲ್ಲಿ ಇತ್ತೀಚಿಗೆ ಬಂಧನಕ್ಕೊಳಗಾದ ವರ್ತೂರ್ ಸಂತೋಷ್ ಮಾತ್ರವಲ್ಲದೆ, ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ಉಪೇಂದ್ರ, ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಹಲವು ನಟರು ಹಾಗೂ ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯ ಶನೇಶ್ವರ ಸ್ವಾಮಿ ದೇಗುಲ ಪ್ರಧಾನ ಅರ್ಚಕ ಧನಂಜಯ ಸ್ವಾಮಿ ಸೇರಿದಂತೆ ಕೆಲ ಸ್ವಾಮೀಜಿಗಳು ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಎನ್ನಲಾದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಜತೆಗೆ, ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು, ಸಾರ್ವಜನಿಕರು ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ಬುಧವಾರ ಮಧ್ಯಾಹ್ನ ಸುಮಾರಿಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಮಲ್ಲೇಶ್ವರಂ ನಿವಾಸಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂತರ, ತಮ್ಮ ವಿಡಿಯೊ ಸಂಬಂಧ ಸೂಕ್ತ ದಾಖಲೆ ಸಮೇತ ಉತ್ತರ ನೀಡುವಂತೆ ಸೂಚಿಸಿ ನೋಟೀಸ್ ಜಾರಿಗೊಳಿಸಿದರು ಎನ್ನಲಾಗಿದೆ.

ಅದೇ ರೀತಿ, ಅರಣ್ಯಾಧಿಕಾರಿಗಳ ತಂಡವೊಂದು ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿ ಇರುವ ದರ್ಶನ್ ಅವರ ನಿವಾಸದಲ್ಲಿ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದರು. ಈ ವೇಳೆ ಪತ್ತೆಯಾದ ವಸ್ತುವೊಂದರ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿ ದರ್ಶನ್ ಅವರಿಗೂ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ, ಜೆಪಿ ನಗರದ ನಿಕಿಲ್ ಕುಮಾರಸ್ವಾಮಿ ನಿವಾಸಕ್ಕೆ ನೋಟೀಸ್ ನೀಡಲು ಬಂದ ನಾಲ್ಕು ಜನ ಅಧಿಕಾರಿಗಳ ತಂಡ, ನಿಖಿಲ್‍ಮನೆಯಲ್ಲಿ ಇಲ್ಲದ ಕಾರಣ ವಾಪಸ್ಸು ತೆರಳಿದ್ದಾರೆ.

ಇನ್ನೂ, ಹುಲಿ ಉಗುರು ಪೆಂಡೆಂಟ್ ಧರಿಸಿದ್ದಾರೆನ್ನಲಾದ ಪ್ರಕರಣದಲ್ಲಿ ನಿರ್ಮಾಪಕ ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ರಾಕ್‍ಲೈನ್ ವೆಂಕಟೇಶ್ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಯಿತು. ಆದರೆ, ರಾಕ್‍ಲೈನ್ ವೆಂಕಟೇಶ್ ಮನೆಯಲ್ಲಿ ಇಲ್ಲ ಎಂದು ಕೆಲಸದವರು ಹೇಳಿದ್ದಾರೆ. ಬಳಿಕ ಮನೆಯಲ್ಲಿದ್ದ ಮಗನನ್ನು ಕರೆದು ಸರ್ಚ್ ವಾರೆಂಟ್‍ಗೆ ಸಹಿ ಹಾಕಿಸಿಕೊಂಡ ಅಧಿಕಾರಿಗಳು ಮನೆಯೊಳಗೆ ಹೋಗಿ ಶೋಧ ಶುರು ಮಾಡಿ, ಅವರಿಗೂ ನೋಟಿಸ್ ಜಾರಿಗೊಳಿಸಿದರು.

ಗುರೂಜಿ: ಹುಲಿ ಚರ್ಮವ ವಿನಯ್ ಗೂರುಜಿ ಬಳಿ ಇದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಂಗಳೂರಿನ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಶೋಧ ಕಾರ್ಯ ನಡೆಸಿ, ಅವರ ಬಳಿ ಮಾಹಿತಿ ಸಂಗ್ರಹಿಸಿದರು.

ಜಗ್ಗೇಶ್‍ಗೆ ಸಂಕಷ್ಟ..?

ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತಾಡಿದ್ದ ನಟ ಜಗ್ಗೇಶ್ ನನ್ನ ಬಳಿ ಹುಲಿ ಉಗುರಿನ ಲಾಕೆಟ್ ಇದೆ ಎಂದು ಹೇಳಿದ್ದಾರೆ. ನನಗೆ 20 ವರ್ಷ ತುಂಬಿದಾಗ ಅಮ್ಮ ನನಗಾಗಿ ಈ ಲಾಕೆಟ್ ನೀಡಿದ್ದರು. ಮಗ ಹುಲಿ ಇದ್ದಾಂಗೆ ಇರಬೇಕು ಎಂದು ಅಮ್ಮ ಈ ಲಾಕೆಟ್‍ನ ಹಾಕಿದ್ದರು ಎಂದು ಜಗ್ಗೇಶ್ ಹೇಳಿದ್ದರು. ಸದ್ಯ ಇದನ್ನೆ ಆಧಾರವಾಗಿಟ್ಟುಕೊಂಡಿರುವ ಅರಣ್ಯಾಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿ ಲಾಕೆಟ್ ಅನ್ನು ಪರಿಶೀಲಿಸುವ ಸಾಧ್ಯತೆ ದಟ್ಟವಾಗಿದೆ.

ಏನಿದು ಕಾಯ್ದೆ..?

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಈ ರೀತಿಯ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10,000 ರೂ., ದಂಡ ವಿಧಿಸುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News