ಕೋಲಾರದ ಟೊಮೆಟೊ ಮಾರುಕಟ್ಟೆ ವಿಸ್ತರಣೆ: ಸಚಿವ ಶಿವಾನಂದ ಪಾಟೀಲ್
Update: 2023-07-14 18:36 GMT
ಬೆಂಗಳೂರು, ಜು.14 ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳಗಾರರು ಇರುವ ಕೋಲಾರ ಜಿಲ್ಲೆಯಲ್ಲಿ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಜಾಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಶುಕ್ರವಾರವಿಧಾನಸಭೆಯ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಕೊತ್ತೂರು ಜಿ.ಮಂಜುನಾಥ್ ಪ್ರಸ್ತಾಪಿಸಿ, ಕೋಲಾರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯು ಏಷ್ಯಾದಲ್ಲೇ ಅತಿ ದೊಡ್ಡದಾದ ಟೊಮೆಟೊ ಮಾರುಕಟ್ಟೆಯಾಗಿದೆ. ಆದರೆ ಅದರ ಜಾಗ ಕಿರಿದಾಗಿದ್ದು, ಅಗತ್ಯ ಮೂಲಸೌಲಭ್ಯಗಳಿಲ್ಲ. ತ್ಯಾಜ್ಯ ವಿಲೇವಾರಿಗೆ ಸ್ಥಳವಾಕಾಶ ಇಲ್ಲ ಎಂದರು.
ಇದಕ್ಕೆ ಉತ್ತರಿಸಿದ ಸಚಿವರು, ಕೋಲಾರ ತಾಲೂಕಿನ ಒಕ್ಕಲೇರಿ ಹೋಬಳಿ ಮಡೇರಹಳ್ಳಿ ಹಾಗೂ ಕಪರಸಿದ್ದನಹಳ್ಳಿಯಲ್ಲಿ ಒಟ್ಟು 37 ಎಕರೆ ಜಮೀನನ್ನು ಟೊಮೆಟೊ ಮಾರುಕಟ್ಟೆಗಾಗಿ ಗುರುತಿಸಲಾಗಿದೆ. ಕೇಂದ್ರ ಅರಣ್ಯ ಸಚಿವಾಲಯದಿಂದ ಅನುಮತಿ ಪಡೆದ ಬಳಿಕ ಮಾರುಕಟ್ಟೆ ಅಭಿವೃದ್ದಿಪಡಿಸಲಾಗುವುದು ಎಂದು ತಿಳಿಸಿದರು.