ನಾಳೆ (ಸೆ.11) ಬೆಂಗಳೂರು ಬಂದ್ ಗೆ ಸಾರಿಗೆ ಸಂಘಗಳ ಒಕ್ಕೂಟ ಕರೆ: ಆಟೋ, ಖಾಸಗಿ ಬಸ್, ಕ್ಯಾಬ್ ಸೇವೆ ಸ್ಥಗಿತ ಸಾಧ್ಯತೆ
ಬೆಂಗಳೂರು, ಸೆ. 10: ಸರಕಾರ ಜಾರಿಗೊಳಿಸಿರುವ ‘ಶಕ್ತಿ ಯೋಜನೆ’ಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ನಷ್ಟಕ್ಕೆ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ನಾಳೆ(ಸೆ.11)ಬೆಂಗಳೂರು ಬಂದ್‍ಗೆ ಕರೆ ನೀಡಿದ್ದು, ಆಟೋ, ಖಾಸಗಿ ಬಸ್, ಕ್ಯಾಬ್ ಸೇರಿ ಖಾಸಗಿ ವಾಹನ ಸೇವೆ ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ಬಂದ್‍ನ ಬಿಸಿ ತಟ್ಟುವ ಸಾಧ್ಯತೆಗಳಿವೆ.
ಖಾಸಗಿ ಬಸ್, ಆಟೋ, ಕ್ಯಾಬ್‍ಗಳ 32ಕ್ಕೂ ಹೆಚ್ಚಿನ ಸಂಘಟನೆಗಳು ಬಂದ್‍ನಲ್ಲಿ ಪಾಲ್ಗೊಳ್ಳುತ್ತಿದ್ದು, ಏಳು ಲಕ್ಷಕ್ಕೂ ಹೆಚ್ಚಿನ ಖಾಸಗಿ ವಾಹನಗಳು ಸೇವೆಯನ್ನು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ, ಬಂದ್ ಕರೆ ಉಲ್ಲಂಘಿಸಿ ಸೇವೆ ನೀಡಲು ಮುಂದಾಗುವ ‘ಹಳದಿ ಫಲಕ (ಯಲ್ಲೋ ಬೋರ್ಡ್) ವಾಹನಗಳನ್ನು ತಡೆಯಲಾಗುವುದು ಎಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಖಾಸಗಿ ಸಾರಿಗೆ ಸಂಘಟನೆಗಳು ಕರೆ ನೀಡಿರುವ ಬಂದ್ ಕರೆಗೆ ಖಾಸಗಿ ಶಾಲಾ ಬಸ್‍ಗಳ ಚಾಲಕರು, ವ್ಯಾನ್ ಮಾಲಕರು ಹಾಗೂ ಇತರೆ ವಾಹನಗಳ ಚಾಲಕರೂ ಬೆಂಬಲ ನೀಡಿದ್ದು, ಇದು ಶಾಲಾ-ಕಾಲೇಜುಗಳ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಗರದ ಕೆಲ ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿವೆ.
‘ಚಾಲಕರಿಗೆ ಮಾಸಿಕ 10ಸಾವಿರ ರೂ.ಪರಿಹಾರ ಧನ ನೀಡಬೇಕು. ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಓಡಿಸುವುದು ಸ್ಥಗಿತಗೊಳಿಸಬೇಕು ಎಂದು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಬೇಡಿಕೆ ಇಟ್ಟಿದೆ.
ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಓಲಾ, ಊಬರ್ ಸೇರಿದಂತೆ ಆನ್‍ಲೈನ್ ಅಪ್ಲಿಕೇಶನ್ ಆಧಾರಿತ ಸೇವೆಗಳನ್ನು ಬಂದ್ ಮಾಡಬೇಕು. ಖಾಸಗಿ ವಾಹನಗಳನ್ನು ಸರಕಾರ ಕಿ.ಮೀ. ಆಧಾರದಲ್ಲಿ ಬಾಡಿಗೆ ಪಡೆಯಬೇಕು. ನಿಯಮ ಬಾಹಿರವಾಗಿ ಖಾಸಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಸರಕಾರವನ್ನು ಒತ್ತಾಯಿಸಿದೆ.
ಹಚ್ಚುವರಿ ಬಸ್ ಸೇವೆ
ಬಂದ್‍ನಿಂದ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಎಂಟಿಸಿ ಮುನ್ನೆಚರಿಕೆ ಕ್ರಮ ಕೈಕೊಂಡಿದೆ. ಕೆಂಪೇಗೌಡ ಏರ್‍ಪೆರ್Çೀಟ್‍ನಿಂದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಟ್ರಿಪ್ ಮಾಡಲು ಚಾಲಕರಿಗೆ ಸೂಚಿಸಲಾಗಿದೆ. ರವಿವಾರ ಮಧ್ಯರಾತ್ರಿಯಿಂದಲೆ ವಿಮಾನ ನಿಲ್ದಾಣದಿಂದ ಬಿಎಂಟಿಸಿ ವಾಯುವಜ್ರ ಬಸ್‍ಗಳ ಸಂಚಾರ ಆರಂಭವಾಗಲಿದೆ. ಪ್ರತಿನಿತ್ಯ 500ಕ್ಕೂ ಅಧಿಕ ಟ್ರಿಪ್‍ಗಳನ್ನ ಬಿಎಂಟಿಸಿ ಓಡಿಸುತ್ತಿದ್ದು, ಬಂದ್ ಇರುವ ಹಿನ್ನೆಲೆ ಹೆಚ್ಚುವರಿಯಾಗಿ 100 ಟ್ರಿಪ್ ಓಡಿಸಲು ಸೂಚಿಸಲಾಗಿದೆ.
‘ರಾಜ್ಯದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಖಾಸಗಿ ವಾಹನಗಳು ಕಾರ್ಯನಿರ್ವಹಿಸುತ್ತಿವೆ. 1.6ಲಕ್ಷಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಕ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಭಟನೆಯಲ್ಲಿ 1 ಲಕ್ಷ ಏರ್‍ಪೆÇೀರ್ಟ್ ಕ್ಯಾಬ್‍ಗಳ ಚಾಲಕರು ಪಾಲ್ಗೊಂಡರೂ ಸರಕಾರಕ್ಕೆ ಬಂದ್‍ನ ಬಿಸಿ ತಟ್ಟಲಿದೆ’
-ನಟರಾಜ್ ಶರ್ಮಾ, ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ
----------------------------------------------------------------------------------------------
ʼನಗರದಲ್ಲಿ ಭದ್ರತೆ ಹೆಚ್ಚಳʼ
‘ಆಟೋ, ಖಾಸಗಿ ಬಸ್ ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಬಂದ್‍ನಲ್ಲಿ ಪಾಲ್ಗೊಳ್ಳುವಂತೆ ಕ್ಯಾಬ್, ಆಟೋ ಹಾಗೂ ಖಾಸಗಿ ಬಸ್ ಚಾಲಕರ ಮೇಲೆ ಬಲವಂತ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’
-ಬಿ.ದಯಾನಂದ, ನಗರ ಪೊಲೀಸ್ ಆಯುಕ್ತ