ಮಳಿಗೆ ಅನುಮತಿ ವಿಚಾರವಾಗಿ ಸಮಗ್ರ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ: ಡಿಜಿಪಿ ಅಲೋಕ್ ಮೋಹನ್
Update: 2023-10-08 06:38 GMT
ಆನೇಕಲ್, ಅ.8: ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಅಕ್ರಮವಾಗಿ ಮಳಿಗೆ ತೆರೆಯಲು ಅನುಮತಿ ನೀಡಿದ್ದ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಅಲೋಕ್ ಮೋಹನ್, ದುರಂತದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಪಟಾಕಿ ಮಳಿಗೆಗೆ ಅನುಮತಿ ನೀಡಿರುವ ವಿಚಾರವಾಗಿ ತನಿಖೆ ಮಾಡಲಾಗುವುದು. ಪೊಲೀಸ್ ಅಧಿಕಾರಿಗಳಾಗಲಿ, ಕಂದಾಯ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು ಹಾಗೂ ಇತರ ಯಾವುದೇ ಅಧಿಕಾರಿಗಳಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ದುರಂತಕ್ಕೆ ಸಂಬಂಧಿಸಿ ಅಂಗಡಿ ಮಾಲಕ, ಅದರ ಪರವಾನಿಗೆದಾರ ಸಹಿತ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮಳಿಗೆ ಮಾಲಕ ಹಾಗೂ ಆತನ ಮಗನನ್ನು ಈಗಾಗಲೇ ಬಂಧಿಸಿದ್ದೇವೆ. ಉಳಿದ ಮೂವರನ್ನೂ ಕೂಡಲೇ ಬಂಧಿಸಲಾಗುವುದು ಎಂದವರು ತಿಳಿಸಿದರು.