ತುಮಕೂರು | ಮೌಢ್ಯಕ್ಕೆ ಮಗು ಬಲಿ ಪ್ರಕರಣ​: ಗುಡಿಸಲಿನಲ್ಲಿ ಒಂಟಿಯಾಗಿದ್ದ ಬಾಣಂತಿಯನ್ನು ಮನೆಗೆ ಸೇರಿಸಿದ ನ್ಯಾಯಾಧೀಶೆ ನೂರುನ್ನೀಸಾ

Update: 2023-07-27 11:41 GMT

ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಿರುವ ನ್ಯಾಯಾಧೀಶರು

ತುಮಕೂರು, ಜು 27: ಹೆರಿಗೆ ನಂತರ ಬಾಣಂತಿ ಜೊತೆಗೆ ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಊರಾಚೆ ಜಮೀನಿನ ಗುಡಿಸಲಿನಲ್ಲಿ ಇಡಲಾಗಿದ್ದ ನವಜಾತ ಶಿಶು ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ನೂರುನ್ನೀಸ ಇಂದು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮಸ್ಥರು ಹಾಗೂ ಸ್ಥಳಿಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಮಗು ಮೃತಪಟ್ಟ ನಂತರವೂ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯನ್ನು ಲೆಕ್ಕಿಸದೆ ತಾಯಿಯನ್ನು ಹಟ್ಟಿಯ ಒಳಗಡೆ ವಾಸ ಮಾಡಲು ಬೀಡದೆ ಊರಾಚೆಯ ಗುಡಿಸಲಿನಲ್ಲಿಯೇ ಒಂಟಿಯಾಗಿ ಇರಿಸಲಾಗಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ನ್ಯಾಯಾಧೀಶರು, ಗ್ರಾಮಸ್ಥರಿಗೆ ಕಾನೂನುಗಳ ತಿಳುವಳಿಕೆ ನೀಡಿ, ಗುಡಿಸಲನ್ನು ಕೆಡವಿಸಿ, ಬಾಣಂತಿಯನ್ನು ಗ್ರಾಮಕ್ಕೆ ಕರೆತರಿಸಿದರು. ಬಳಿಕ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದ ನ್ಯಾಯಾಧೀಶರು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದರು.

ಈ ಹಿಂದೆ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಗುಡಿಸಲಿಗೆ ತೆರಳಿ ಬಾಣಂತಿ ಹಾಗೂ ಮಗುವನ್ನು ಮನೆಗೆ ಸೇರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

''ಆರೋಗ್ಯದ ಹೆಚ್ಚಿನ ನಿಗಾ ಅವಶ್ಯಕತೆ ಇರುವ ಬಾಣಂತಿ ಮತ್ತು ಮಗುವನ್ನು, ಊರಾಚೆಯ ಗುಡಿಸಲಿನಲ್ಲಿಯೇ ಇರಿಸಿದ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವಾಗಿದೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಆಚಾರಗಳಿಗಿಂತ ಪ್ರಾಣ ಮುಖ್ಯ ಅನ್ನೋದನ್ನು ಯಾರೂ ಮರೆಯಬಾರದು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ತಪ್ಪಿಸ್ಥತರ ವಿರುದ್ದ ಕಠಿಣ ಕ್ರಮವಹಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು, ಈ ಬಗ್ಗೆ ಸಮಗ್ರ ವರದಿಯನ್ನು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ'' ಎಂದರು.

ಸ್ವಚ್ಛತೆಗೆ ಆದ್ಯತೆ: ಬೆಳ್ಳಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಾರ್ಡ್ಗಳು, ಔಷಧಿ ಉಗ್ರಾಣ ಕೊಠಡಿ, ಶೌಚಾಲಯಕ್ಕೆ ಭೇಟಿ ನೀಡಿದ ನ್ಯಾಯಾಧೀಶರು, ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ತಾಕೀತು ಮಾಡಿದರು.

ಈ ಸಂಧರ್ಭದಲ್ಲಿ ತಹಸೀಲ್ದಾರ್ ಸಿದ್ದೇಶ್, ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು , ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.



 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News