ತುಮಕೂರು: ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಪಿಯುಸಿ ವಿದ್ಯಾರ್ಥಿ
ಪಾವಗಡ (ತುಮಕೂರು): ಮೊಬೈಲ್ ಚಾರ್ಜರ್ ಕೇಳಿದ್ದಕ್ಕೆ ಕೊಡಲಿಲ್ಲವೆಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಸಿಂಗರೆಡ್ಡಿ ಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಮೃತ ಯುವಕನನ್ನು ಗ್ರಾಮದ ಆಶಾ ಕಾರ್ಯಕರ್ತೆ ವರಲಕ್ಷ್ಮಿ ಎಂಬುವವರ ಪುತ್ರ ನಿಖಿಲ್ ಗೌಡ (18) ಎಂದು ಗುರುತಿಸಲಾಗಿದೆ.
ರವಿವಾರ ಮದ್ಯಾಹ್ನ ಈ ಘಟನೆ ನಡೆದಿದ್ದು, ವೈ ಎನ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಪಾವಗಡ ಪಟ್ಟಣದ ಶಾಂತಿ ಎಸ್ ಎಸ್ ಕೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ರವಿವಾರದ ರಜೆ ಕಾರಣ ಮನೆಯಲ್ಲಿಯೇ ಇದ್ದ ನಿಖಿಲ್ ತಾಯಿಯೊಂದಿಗೆ ನನಗೆ ಮೊಬೈಲ್ ಚಾರ್ಜರ್ ಕೊಡು ಎಂದು ತಮ್ಮ ತಾಯಿ ವರಲಕ್ಷ್ಮಿ ಅವರ ಬಳಿ ಗಲಾಟೆ ಮಾಡಿದ್ದಾನೆ. ಈ ವೇಳೆನನ್ನ ಬಳಿ ಚಾರ್ಜರ್ ಇಲ್ಲವೆಂದು ಹೇಳಿ ವರಲಕ್ಷ್ಮಿ ನೆರೆ ಮನೆಗೆ ಹೂವು ಕಟ್ಟಲೆಂದು ಹೋಗಿದ್ದಾರೆ.
ಸುಮಾರು 2 ಗಂಟೆಗೆ ಸಮಯಕ್ಕೆ ಹಿಂತಿರುಗಿ ಮನೆ ಬಳಿ ಬಂದು ಬಾಗಿಲು ಬಡಿದಾಗ ಒಳಗಿದ್ದ ನಿಖಿಲ್ ಗೌಡ ಬಾಗಿಲು ತೆಗೆದಿಲ್ಲ. ಇದರಿಂದ ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಕಬ್ಬಿಣದ ತೇರಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ನಿಖಿಲ್ ಗೌಡ ತಾಯಿ ವರಲಕ್ಷ್ಮಿ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಮೃತ ನಿಖಿಲ್ ಗೌಡ ತಂದೆ ಕಳೆದ ಎಂಟು ವರ್ಷಗಳ ಹಿಂದೆ ಸಾವನ್ನಪ್ಪಿದ್ದು ಸದ್ಯ ತಾಯಿ ವರಲಕ್ಷ್ಮಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ಥಳಕ್ಕೆ ವೈ ಎನ್ ಹೊಸಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಾಳಪ್ಪ ನಾಯ್ಕೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ.