ಹಜ್ ಯಾತ್ರೆ ವೇಳೆ ಬೆಂಗಳೂರಿನ ಇಬ್ಬರು ಮೃತ್ಯು
Update: 2024-06-20 14:58 GMT
ಬೆಂಗಳೂರು : ಸೌದಿ ಅರೇಬಿಯಾದಲ್ಲಿ ಅಸಾಧ್ಯ ಸೆಖೆ ಮತ್ತು ಬಿಸಿಲ ಹೊಡೆತಕ್ಕೆ ಪ್ರಸಕ್ತ ಸಾಲಿನ ಹಜ್ ಯಾತ್ರೆ ವೇಳೆ ಮೃತಪಟ್ಟ ನೂರಾರು ಯಾತ್ರಿಗಳ ಪೈಕಿ ಬೆಂಗಳೂರಿನ ಇಬ್ಬರು ಯಾತ್ರಾರ್ಥಿಗಳು ಸೇರಿದ್ದಾರೆ ಎಂದು ರಾಜ್ಯ ಹಜ್ ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಯಾತ್ರಾರ್ಥಿಗಳನ್ನು ಆರ್.ಟಿ.ನಗರದ ಕೌಸರ್ ರುಖ್ಸಾನಾ(70) ಹಾಗೂ ಕೆ.ಜಿ.ಹಳ್ಳಿ ಸಮೀಪದ ಅಮರ್ ಲೇಔಟ್ ನಿವಾಸಿ ಅಬ್ದುಲ್ಲಾ ಅನ್ಸಾರಿ(56) ಎಂದು ಗುರುತಿಸಲಾಗಿದೆ. ನಿರ್ಜಲೀಕರಣ ಮತ್ತು ಸೂರ್ಯನ ಶಾಖದಿಂದಾಗಿ ಇವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪವಿತ್ರ ಮಕ್ಕಾ ನಗರದ ಹೊರವಲಯದಲ್ಲಿರುವ ಮೀನಾ ಕಣಿವೆಯಲ್ಲಿ ಯಾತ್ರಾರ್ಥಿಗಳು ಅಲ್-ಜಮಾರತ್ ಆಚರಣೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.