ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ: ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ ಪ್ರಮೋದ್ ಮಧ್ವರಾಜ್‌

Update: 2023-08-14 15:09 GMT

ಪ್ರಮೋದ್ ಮಧ್ವರಾಜ್ ಫೈಲ್‌ ಚಿತ್ರ

ಚಿಕ್ಕಮಗಳೂರು, ಆ.14: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಿದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧನಾಗಿದ್ದೇನೆ. ಒಂದು ವೇಳೆ ಬೇರೆಯವರಿಗೆ ಟಿಕೆಟ್ ನೀಡಿದಲ್ಲಿ ಅವರ ಪರ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. 

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದೇನೆ. ನನ್ನ ಉಸಿರುವ ಇರುವವರೆಗೂ ಅಥವಾ ರಾಜಕೀಯ ನಿವೃತ್ತಿವರೆಗೂ ಬಿಜೆಪಿಯಲ್ಲಿ ಉಳಿಯುತ್ತೇನೆ ಹೊರತು ಪಕ್ಷ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೂಚನೆಯಂತೆ ಕೆಲಸ ಮಾಡಿದ್ದೇನೆ ಎಂದ ಅವರು, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಉಡುಪಿ ಜಿಲ್ಲೆಯ ಮಟ್ಟಕ್ಕೆ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಇಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಕಸ್ತೂರಿ ರಂಗನ್ ವರದಿ, ಒತ್ತುವರಿ, ಬಫರ್ ಝೋನ್, ಡೀಮ್ಡ್ ಅರಣ್ಯದಂತಹ ಅನೇಕ ಸಮಸ್ಯೆಗಳು ಇಲ್ಲಿವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಚೇತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಸಾಧಿಸಲು ಸಾಧ್ಯವಾಗಿಲ್ಲ ಎಂದ ಅವರು, ಪಕ್ಷದ ವರಿಷ್ಠರು ಮುಂದಿನ ಲೋಕಸಭೆ ಚುನಾವಣೆ ಸಂದರ್ಭ ಈ ಕ್ಷೇತ್ರದಿಂದ ತನಗೆ ಬಿಜೆಪಿ ಟಿಕೆಟ್ ನೀಡಿದಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News