ಉಡುಪಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ: ಸಚಿವ ಭೈರತಿ ಸುರೇಶ್

Update: 2023-12-15 15:27 IST
ಉಡುಪಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ: ಸಚಿವ ಭೈರತಿ ಸುರೇಶ್
  • whatsapp icon

ಬೆಳಗಾವಿ: ಉಡುಪಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಸಕ್ತ ಸಾಲಿನಲ್ಲಿ 9.44ಲಕ್ಷ ರೂ.ಗಳನ್ನು ಹಂಚಿಕೆ ಮಾಡಿದ್ದು, ಆ ಪೈಕಿ ನಗರಸಭೆಗೆ 2.36 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಖಾಸಗಿ ಮಾಲಕತ್ವದ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಪಡೆದು ಟ್ಯಾಂಕರ್ ಮೂಲಕ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ  ಸುರೇಶ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಯಶ್ಪಾಲ್ ಸುವರ್ಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಉಡುಪಿ ನಗರದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ವರೆಗೆ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಪ್ರಸ್ತುತ ಉಡುಪಿ ನಗರಕ್ಕೆ ಬಜೆ ಬಳಿ ಇರುವ ನೀರು ಶುದ್ದೀಕರಣ ಘಟಕಕ್ಕೆ ಸ್ವರ್ಣ ನದಿ ಮೂಲದಿಂದ ನೀರನ್ನು ಪಡೆಯಲಾಗುತ್ತಿದ್ದು, ಬರಗಾಲದಲ್ಲಿ ನೀರಿನ ಕೊರತೆ ನೀಗಿಸಲು, ಸದಾಕಾಲ  ಹರಿಯುವ ವರಾಹಿ ನದಿ ಮೂಲದಿಂದ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡಲು, ‘ಕ್ವಿಮಿಪ್ ಯೋಜನೆ’ ಅಡಿ ಹಾಲಾಡಿ, ಬಳಿ ಎಂಎಲ್‍ಡಿ ನೀರು 45 ಶುದ್ದೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ.

ಶುದ್ದೀಕರಿಸಿದ ನೀರನ್ನು ಮಣಿಪಾಲ್ ಬಳಿ ಇರುವ ಜಲಸಂಗ್ರಹಗಾರಕ್ಕೆ ಪಂಪ್ ಮಾಡಿ ಗುರುತ್ವಾಕರ್ಷಣೆ ಮೂಲಕ ಹೊಸದಾಗಿ ನಿರ್ಮಿಸಲಾಗುತ್ತಿರುವ 7 ಮೇಲ್ಮಟ್ಟದ ಜಲಸಂಗ್ರಹಗಾರಗಳಿಗೆ ಕಳುಹಿಸಿ ಉಡುಪಿ ನಗರ ಹಾಗೂ ನೀರು ಶುದ್ದೀಕರಣ ಘಟಕದಿಂದ ಪೈಪ್‍ಲೈನ್ ಹಾದುಹೋಗುವ ಮಾರ್ಗ ಮಧ್ಯ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹೂಳೆತ್ತಲು ಕ್ರಮ: ಉಡುಪಿ ನಗರಸಭೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ಸ್ವರ್ಣ-ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಜೆ ಕಿಂಡಿ ಅಣೆಕಟ್ಟಿನಲ್ಲಿ 3.5ಲಕ್ಷ ಟನ್ ಹೂಳು ಸಂಗ್ರಹವಿದ್ದು, ಸದರಿ ಹೂಳನ್ನು ತೆರವುಗೊಳಿಸಿದ್ದಲ್ಲಿ 12 ದಿನಗಳಿಗೆ ಸಾಕಾಗುವಷ್ಟು ನೀರಿನ ಸಂಗ್ರಹಣೆ ಹೆಚ್ಚಾಗುತ್ತದೆ. ಬಜೆ ಡ್ಯಾಂನಲ್ಲಿ ಸಂಗ್ರಹವಾಗುವ ಹೂಳನ್ನು ತೆರವುಗೊಳಿಸಲು ನಗರಸಭಾ ಅನುದಾನದಲ್ಲಿ 4.98 ಕೋಟಿ ರೂ.ವೆಚ್ಚದಲ್ಲಿ ಹೂಳು ತೆಗೆಯಲಾಗುವುದು ಎಂದು ಅವರು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News