ಅನಧಿಕೃತ ಜಾಹೀರಾತು: ಕೈಗೊಂಡ ಕ್ರಮದ ಮಾಹಿತಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ಹಾಕಲಾಗಿರುವ ಜಾಹೀರಾತು ಫಲಕಗಳ ತೆರವು ಮಾಡುವುದು ಮತ್ತು ಹೊಸದಾಗಿ ಜಾಹೀರಾತು ಅಳವಡಿಸಿರುವುದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ವರದಿ ಸಲ್ಲಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ಆಕ್ಷೇಪಿಸಿ ಬೆಂಗಳೂರಿನ ಸರಸ್ವತಿಪುರಂನ ಮಾಯಿಗೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ನ್ಯಾಯಪೀಠವು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಏನಾದರು ಕ್ರಮಕೈಗೊಳ್ಳಲಾಗಿದೆಯೇ ಅಥವಾ ಆ ಸಂಬಂಧ ಪ್ರಸ್ತಾವ ಇದೆಯೇ ಎಂದು ಬಿಬಿಎಂಪಿಯನ್ನು ಪ್ರಶ್ನಿಸಿತು.
ಅರ್ಜಿದಾರರು ಜಾಹೀರಾತು ಫಲಕ ಮತ್ತು ಹೋರ್ಡಿಂಗ್ ಅಳವಡಿಸಿರುವುದಕ್ಕೆ ಸಂಬಂಧಿಸಿದಂತೆ ಮೆಮೊ ಸಲ್ಲಿಸಿದ್ದಾರೆ. ಈ ಸಂಬಂಧ ಪೂರ್ವಾನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದೂ ಸೇರಿ ಹಿಂದಿನ ನಮ್ಮ ಆದೇಶಗಳಿಗೆ ಪ್ರತಿಕ್ರಿಯೆ ಸಲ್ಲಿಸಬೇಕು. ಅಕ್ರಮ ಜಾಹೀರಾತು ಅಳವಡಿಸಿರುವ ಮಾಹಿತಿಯನ್ನು ವ್ಯಾಪ್ತಿ ಹೊಂದಿದ ಪೊಲೀಸರಿಗೆ ತಿಳಿಸಿರುವುದಕ್ಕೆ ಅವರು ಕೈಗೊಂಡಿರುವ ಕ್ರಮವನ್ನು ತಿಳಿಸಬೇಕು ಎಂದು ಆದೇಶದಲ್ಲಿ ಹೇಳಿದೆ.
ಬಿಬಿಎಂಪಿಯ ಅನುಮತಿ ಪಡೆಯದೆ ಮತ್ತು ಶುಲ್ಕ ಪಾವತಿಸದೇ ಅಕ್ರಮ ಜಾಹೀರಾತುಗಳನ್ನು ಅಳವಡಿಸಿದ್ದರೆ ತಪ್ಪತಸ್ಥ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಸೂಕ್ತ ಆದೇಶ ಹೊರಡಿಸಲಾಗುವುದು. ಇದರಲ್ಲಿ ದುಬಾರಿ ದಂಡ ಅಥವಾ ವ್ಯಾಪ್ತಿ ಹೊಂದಿದ ಪೊಲೀಸರಿಗೆ ಪ್ರಕರಣದ ದಾಖಲಿಸಲು ಸೂಚಿಸಲಾಗುವುದು ಎಂದೂ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ನ್ಯಾಯವಾದಿ ಪ್ರೋ. ರವಿವರ್ಮ ಕುಮಾರ್ ಅವರು, ನ್ಯಾಯಾಲಯ ಹಲವು ಆದೇಶ ಮಾಡಿರುವ ಹೊರತಾಗಿಯೂ ಅಕ್ರಮ ಜಾಹೀರಾತು ಹಾವಳಿ ತಪ್ಪಿಲ್ಲ. ಅಕ್ರಮ ಜಾಹೀರಾತು ಮತ್ತು ಹೋರ್ಡಿಂಗ್ ಗಳನ್ನು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದು, ಇದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಆಗ ಪೀಠವು 2023ರ ಆ.2ರಂದು ಅಕ್ರಮವಾಗಿ ಅಳವಡಿಸಿರುವ ಜಾಹೀರಾತು/ಹೋರ್ಡಿಂಗ್/ಫ್ಲೆಕ್ಸ್ ಒಂದು ಲಕ್ಷ ರೂ.ದಂಡ ವಿಧಿಸುವ ತನ್ನ ಆದೇಶವನ್ನು ನೆನಪಿಸಿದೆ.