ಎಚ್.ಡಿ ದೇವೇಗೌಡರನ್ನು ಭೇಟಿಯಾದ ಕೇಂದ್ರ ಸಚಿವ ಅರ್ಜುನ್ ಮುಂಡಾ
ಬೆಂಗಳೂರು: ಕೇಂದ್ರ ಕೃಷಿ ಮತ್ತು ಬುಡಕಟ್ಟು ವ್ಯವಹಾರಗಳ ಖಾತೆ ಸಚಿವರಾದ ಅರ್ಜುನ್ ಮುಂಡಾ ಅವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಈ ಕುರಿತು ʼಎಕ್ಸ್ʼ ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರು ಎಚ್.ಡಿ ಕುಮಾರಸ್ವಾಮಿ, ʼಕೇಂದ್ರ ಸರಕಾರದ ಕೃಷಿ ಮತ್ತು ಬುಡಕಟ್ಟು ವ್ಯವಹಾರಗಳ ಖಾತೆ ಸಚಿವರಾದ ಅರ್ಜುನ್ ಮುಂಡ ಅವರು ಮಾಜಿ ಪ್ರಧಾನಿಗಳಾದ ಎಚ್. ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಡುಗೊಲ್ಲ ಸಮುದಾಯವನ್ನು ಎಸ್.ಟಿ ವರ್ಗಕ್ಕೆ ಸೇರಿಸುವುದು, ರಾಜ್ಯದ ತೆಂಗು ಬೆಳೆಗಾರರಿಂದ ಕೊಬ್ಬರಿ ಖರೀದಿ ಹಾಗೂ ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
‘ಎಸ್‍ಟಿಗೆ ಕಾಡುಗೊಲ್ಲ ಸಮುದಾಯ’ ಜ.15- 16ಕ್ಕೆ ಹೊಸದಿಲ್ಲಿಗೆ ಬರುವಂತೆ ತಿಳಿಸಿದ ಕೇಂದ್ರ ಸಚಿವರು
ದೇವೇಗೌಡರ ನಿವಾಸಕ್ಕೆ ಕೇಂದ್ರ ಸಚಿವ ಅರ್ಜುನ್ ಮುಂಡಾ ಭೇಟಿ ಸಂದರ್ಭದಲ್ಲಿ ದೇವೇಗೌಡ, ಶೋಷಿತ ಕಾಡುಗೊಲ್ಲ ಸಮುದಾಯವನ್ನು ಎಸ್‍ಟಿ ಪ್ರವರ್ಗಕ್ಕೆ ಸೇರಿಸುವ ವಿಚಾರದಲ್ಲಿ ತಾವು ಪ್ರಧಾನಿ ಮೋದಿಯವರಿಗೆ ಸಲ್ಲಿಸಿರುವ ಮನವಿ ಸಲ್ಲಿಸಿದ್ದು, ಆ ಪತ್ರದ ಬಗ್ಗೆ ಪ್ರಸ್ತಾಪ ಮಾಡಿದರು.
ಈ ವೇಳೆ ಸಮಾಲೋಚನೆ ನಡೆಸಿದ ಅರ್ಜುನ್ ಮುಂಡಾ, ಪ್ರಧಾನಿ ಮೋದಿಗೆ ಸಲ್ಲಿಸಿದ ಮನವಿ ಪತ್ರವನ್ನು ಬುಡಕಟ್ಟು ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಆ ಬಗ್ಗೆ ಬಹಳ ಮಹತ್ವ ಕೊಟ್ಟು ಪರಾಮರ್ಶೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರು ಕೃಷಿ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಬಂದಿದ್ದರು. ಹಾಗೆ ಮಾಜಿ ಪ್ರಧಾನಿ ನಿವಾಸಕ್ಕೆ ಗೌರವಪೂರ್ವಕವಾಗಿ ಭೇಟಿ ನೀಡಿದ್ದರು. ಈ ವೇಳೆ ರಾಜ್ಯದ ರೈತರ ಸಂಕಷ್ಟದ ಬಗ್ಗೆ ವಿವರಣೆ ನೀಡಲಾಯಿತು. ಕೊಬ್ಬರಿ ಬೆಲೆ ಏರಿಕೆಗೆ ಮನವಿ ಮಾಡಿದ್ದೆವು. ಈ ತಿಂಗಳ 15-16ಕ್ಕೆ ಹೊಸದಿಲ್ಲಿಗೆ ಬರುವಂತೆ ಕೇಂದ್ರ ಸಚಿವರು ಹೇಳಿದ್ದಾರೆ. ನಾನು ಹೋಗುತ್ತೇನೆ ಎಂದು ತಿಳಿಸಿದರು.