ಚಿಕ್ಕಮಗಳೂರು | ದಲಿತ ಕುಟುಂಬಗಳ ಎತ್ತಂಗಡಿಗೆ ಮೇಲ್ವರ್ಗದವರಿಂದ ಹುನ್ನಾರ: ಸತ್ಯಶೋಧನಾ ಸಮಿತಿ ಆರೋಪ

Update: 2023-07-12 16:15 GMT

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಸತ್ಯ ಶೋಧನಾ ಸಮಿತಿ ಸದಸ್ಯರು 

ಚಿಕ್ಕಮಗಳೂರು, ಜು.12: ದಲಿತ ಸಮುದಾಯದ ಯುವಕನ ಮೇಲೆ ಮೇಲ್ವರ್ಗದವರು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಗರದ ಕಲ್ಯಾಣ ನಗರ ಬಡಾವಣೆಯಲ್ಲಿ ನಡೆದಿದ್ದು, ಈ ಘಟನೆ ಸಂಬಂಧ ಸಂತ್ರಸ್ತರಿಗೆ ಪೊಲೀಸರು ನ್ಯಾಯ ಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಹೈಕೋರ್ಟ್ ವಕೀಲ ಹಾಗೂ ಸತ್ಯಶೋಧನಾ ತಂಡದ ಸದಸ್ಯ ಶಿವಮಾನಿತನ್ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಲ್ಲೆಯ ಹಿಂದೆ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ಇತ್ತು. ಇದಕ್ಕಾಗಿ ಮೇಲ್ವರ್ಗದವರು ದಲಿತ ಯುವಕನ ಕುಟುಂಬ ಸೇರಿದಂತೆ ಬಡಾವಣೆಯಲ್ಲಿರುವ ನಾಲ್ಕು ಕುಟುಂಬಗಳಿಗೆ ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಈ ಅಂಶಗಳು ಸತ್ಯ ಶೋಧನೆಯಿಂದ ತಿಳಿದು ಬಂದಿದೆ ಎಂದರು.

2023ರ ಮೇ 16ರಂದು ಚಿಕ್ಕಮಗಳೂರಿನ ಕಲ್ಯಾಣ ನಗರದ ಬಡಾವಣೆಗೆ ಹೊಂದಿಕೊಂಡಿರುವ ಆಶ್ರಯ ಬಡಾವಣೆಯ ನಿವಾಸಿಯಾಗಿರುವ ಅಂತೋಣಿಯಮ್ಮ ಎಂಬವರ ಸಂಬಂಧಿ ಅರುಣ್‌ಕುಮಾರ್ ಎಂಬ ದಲಿತ ಯುವಕ ತನ್ನ ಸ್ನೇಹಿತರೊಂದಿಗೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಸಂಭ್ರಮಾಚರಿಸಿದ್ದರು. ಈ ಕ್ಷುಲ್ಲಕ ಕಾರಣಕ್ಕೆ ಬಡಾವಣೆಯ ಮೇಲ್ವರ್ಗದ ಪುಟ್ಟರಾಜು, ಮೋಹನ್, ಮಂಜುನಾಥ್ ಎಂಬವರು ಅರುಣ್‌ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅರುಣ್‌ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ಹೇಳಿಕೆ ನೀಡಿದ್ದು, ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿಕೊಂಡರೂ ಕೊಲೆ ಯತ್ನ ನಡೆಸಿದ ಆರೋಪಿಗಳ ವಿರುದ್ಧ 307 ಸೆಕ್ಷನ್ ದಾಖಲಿಸಿಲ್ಲ. ಪ್ರಕರಣದ ಆರೋಪಿಗಳು ಸದ್ಯ ಜಾಮೀನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ದಲಿತ ಯುವಕನ ಮೇಲೆ ನಡೆದ ಈ ಜಾತಿ ದೌರ್ಜನ್ಯದ ಘಟನೆಯ ಸತ್ಯಾಸತ್ಯತೆ ತಿಳಿಯಲು ನಾನು ಸೇರಿದಂತೆ ಸಂವಿಧಾನ ಸಂರಕ್ಷಣಾ ವೇದಿಕೆಯ ಕೃಷ್ಣಮೂರ್ತಿ, ಬೆಂಗಳೂರಿನ ಡಾ.ಸಿಲ್ವಿಯಾ ಕರ್ಪಗಂ ಮತ್ತು ಸಂಶೋಧಕ ಡಾ.ಸಿದ್ದಾರ್ಥ ಅವರನ್ನೊಳಗೊಂಡ ಸತ್ಯ ಶೋಧನಾ ಸಮಿತಿ ನೇತೃತ್ವದ ತಂಡ ಹಲ್ಲೆ ಘಟನೆ ಬಗ್ಗೆ ಸಂಶೋಧನೆ ನಡೆಸಿತ್ತು. ಆದರೆ, ಮೇಲ್ವರ್ಗದವರು ದಲಿತ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆಗೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸಿರುವ ಕಾರಣವಲ್ಲ. ಬದಲಿಗೆ ಅರುಣ್‌ಕುಮಾರ್ ಸೇರಿದಂತೆ ಆ ಬಡಾವಣೆಯ ಆಶ್ರಯ ಬಡಾವಣೆಯಲ್ಲಿ ವಾಸಿಸುತ್ತಿರುವ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ನಾಲ್ಕು ದಲಿತ ಸಮುದಾಯದ ಕುಟುಂಬಗಳನ್ನು ಒಕ್ಕಲೆಬ್ಬಿಸುವುದಾಗಿತ್ತು ಎಂಬ ಸತ್ಯ ತಿಳಿದು ಬಂದಿದೆ ಎಂದರು.

ಅರುಣ್‌ಕುಮಾರ್ ಅವರ ಮೇಲೆ ನಡೆದ ಕೊಲೆಯತ್ನ ಪ್ರಕರಣದಲ್ಲಿ 307 ಸೆಕ್ಷನ್ ಹಾಕದಿರುವ ಬಗ್ಗೆ ಸತ್ಯಶೋಧನಾ ಸಮಿತಿ ತಂಡ ಎಸ್ಪಿ ಅವರನ್ನು ಪ್ರಶ್ನಿಸಿದಾಗ, ಸೆಕ್ಷನ್ ಹಾಕದಿರುವ ಬಗ್ಗೆ ಪೊಲೀಸರಿಗೆ ನೋಟಿಸ್ ನೀಡಿರುವುದಾಗಿ ಹೇಳಿ, ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಕೊನೆಗೂ 307 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಲ್ಲ ಎಂದು ದೂರಿದರು.

ಅರುಣ್‌ಕುಮಾರ್ ಅವರ ಸಂಬಂಧಿ ಅಂತೋಣಿಯಮ್ಮ ಹಾಗೂ ಇತರ ನಾಲ್ಕು ದಲಿತ ಕುಟುಂಬದವರು ಈ ಬಡಾವಣೆಯಲ್ಲಿ ವಾಸ ಮಾಡುತ್ತಿರುವುದನ್ನು ಮೇಲ್ವರ್ಗದವರು ಸಹಿಸುತ್ತಿಲ್ಲ. ಈ ಕಾರಣಕ್ಕೆ ಈ ಕುಟುಂಬಗಳಿಗೆ ಕಳೆದ 20 ವರ್ಷಗಳಿಂದ ಮೇಲ್ವರ್ಗದ ಪುಟ್ಟರಾಜು, ಮಂಜುನಾಥ್ ಹಾಗೂ ಮೋಹನ್ ಎಂಬವರು ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ ಎಂಬುದು ಸತ್ಯ ಶೋಧನೆಯಿಂದ ತಿಳಿದು ಬಂದಿದೆ ಎಂದ ಶಿವಮಾನಿತನ್, ನಾಲ್ಕು ದಲಿತ ಕುಟುಂಬಗಳು ಇಂದಿಗೂ ಮೇಲ್ವರ್ಗದವರಿಂದ ದೌರ್ಜನ್ಯ ಎದುರಿಸುತ್ತಿದ್ದಾರೆ. ಸಂತ್ರಸ್ತರ ಕುಟುಂಬಗಳ ಹೆಣ್ಮಕ್ಕಳೂ ಸೇರಿದಂತೆ ಅವರ ಸಂಬಂಧಿಕರಿಗೂ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸತ್ಯಶೋಧನಾ ಸಮಿತಿ ಸದಸ್ಯ ಸಂಶೋಧಕ ಕೆ.ಜೆ.ಸಿದ್ಧಾರ್ಥ್, ವೈದ್ಯೆ ಡಾ.ಸಿಲ್ವಿಯಾ ಕರ್ಪಗಂ, ಸಂವಿಧಾನ ಸಂರಕ್ಷಣಾ ವೇದಿಕೆಯ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

‘ರಾಜ್ಯ ಸರಕಾರಕ್ಕೆ ವರದಿ ಸಲ್ಲಿಕೆ’

ದಲಿತ ಕುಟುಂಬಗಳ ಮೇಲೆ ನಡೆಯುತ್ತಿರುವ ಈ ಜಾತಿ ದೌರ್ಜನ್ಯದ ವಿರುದ್ಧ ಸತ್ಯ ಶೋಧನಾ ಸಮಿತಿ ಸಂಗ್ರಹಿಸಿರುವ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು. ವರದಿಯಲ್ಲಿ ಪೊಲೀಸರ ತಾರತಮ್ಯ, ಕರ್ತವ್ಯ ಲೋಪಗಳ ಬಗ್ಗೆಯೂ ಉಲ್ಲೇಖಿಸಿದ್ದು, ಸಂತ್ರಸ್ತರಿಗೆ ರಾಜ್ಯ ಸರಕಾರ ನ್ಯಾಯ ಒದಗಿಸಬೇಕು. ಮೇಲ್ವರ್ಗದವರ ಜಾತಿ ದೌರ್ಜನ್ಯದ ವಿರುದ್ಧ ಸರಕಾರ ರಕ್ಷಣೆ ನೀಡಬೇಕು. ಕಿರುಕುಳ ಎಸಗಿರುವ ಮತ್ತು ಹಲ್ಲೆ ಪ್ರಕರಣದಲ್ಲಿ ಪ್ರಕರಣವನ್ನು ತಿರುಚಿ ತಾರತಮ್ಯ ಮಾಡಿರುವ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಶಿವಮಾನಿತನ್ ಒತ್ತಾಯಿಸಿದರು.

''ನಾನು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನನ್ನ ಮಕ್ಕಳು ನನ್ನಂತೆ ಕೂಲಿ ಮಾಡಬಾರದೆಂದು ಶಾಲೆಗೆ ಕಳುಹಿಸಲು ಮುಂದಾದರೆ ಅದಕ್ಕೆ ನಮ್ಮ ಮನೆ ಸುತ್ತಮುತ್ತಲಿನ ಮೇಲ್ವರ್ಗದವರು ಅಡ್ಡಿಪಡಿಸುತ್ತಿದ್ದಾರೆ. ನಾವು ಸ್ನಾನ ಮಾಡಿದ ನೀರು ಚರಂಡಿಯಲ್ಲಿ ಹರಿಯದಂತೆ ಅಡ್ಡಲಾಗಿ ಕಟ್ಟೆ ನಿರ್ಮಿಸಿದ್ದಾರೆ. ಆ ನೀರನ್ನು ತೋಡಿಕೊಂಡು ಬೇರೆಡೆ ಚೆಲ್ಲಬೇಕಾದ ಸ್ಥಿತಿ ಉಂಟಾಗುತ್ತಿದೆ. ಅವರು ನಡೆಸುವ ದೌರ್ಜನ್ಯವನ್ನು ಪ್ರಶ್ನಿಸಿದರೆ ಉದ್ದೇಶಪೂರ್ವಕವಾಗಿ ಜಗಳ ತೆಗೆದು ಹೆಣ್ಣುಮಕ್ಕಳ ಬಟ್ಟೆ ಹರಿಯುತ್ತಾರೆ. ನಾವು ಸತ್ಯಶೋಧನಾ ಸಮಿತಿ ತಂಡವನ್ನು ಭೇಟಿಯಾಗಿದ್ದಕ್ಕೆ ಪೊಲೀಸರು ಬೆದರಿಕೆ ಹಾಕಿದ್ದಾರೆ''

- ಅಂತೋಣಿಯಮ್ಮ, ಸಂತ್ರಸ್ತೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ನಿರ್ಲಕ್ಷ ವಹಿಸಿದ್ದು, ಸಂತ್ರಸ್ತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದೆ. ನೊಂದ ದಲಿತರು ದೂರು ನೀಡಿದರೆ ಅವರ ವಿರುದ್ಧ ಪ್ರತೀ ಎಫ್‌ಐಆರ್ ದಾಖಲಿಸಿ ಬೆದರಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ದಲಿತ ಸಂಘಟನೆಗಳ ಮಧ್ಯಪ್ರವೇಶದಿಂದ ಕೆಲ ಪ್ರಕರಣಗಳಲ್ಲಿ ದೂರು ದಾಖಲಾದರೂ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ.-

- ಶಿವಮಾನಿತನ್, ಹೈಕೋರ್ಟ್ ವಕೀಲ ಹಾಗೂ ಸತ್ಯ ಶೋಧನ ತಂಡದ ಸದಸ್ಯ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News