ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆ ಹಂತ ಹಂತವಾಗಿ ಭರ್ತಿಗೆ ಕ್ರಮ: ಗೃಹಸಚಿವ ಡಾ.ಜಿ.ಪರಮೇಶ್ವರ್

"ಪೊಲೀಸರಿಗೆ ವಾರದ ರಜೆ ಕೊಡಬೇಕು ಎಂಬುದು ನಮ್ಮ ಉದ್ದೇಶ. ಇದು ಅವರಿಗೆ ಅವಶ್ಯಕ. ಅದೇರೀತಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ವಿಶೇಷ ಭತ್ತೆ ನೀಡುವಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು."

Update: 2023-07-01 10:32 GMT

ಮೈಸೂರು, ಜು.1: ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆಗಳು ಖಾಲಿ ಇದ್ದು, ಮೊದಲ ಹಂತದಲ್ಲಿ 4 ಸಾವಿರ ಪೊಲೀಸ್ ಪೇದೆ 400 ಇನ್ ಸ್ಪೆಕ್ಟರ್ ಹುದ್ದೆ ಭರ್ತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಎರಡು ದಿನಗಳ ಮೈಸೂರು ಭೇಟಿಗೆ ಆಗಮಿಸಿದ ಅವರು ಶನಿವಾರ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀಚಾಮುಂಡೇಶ್ವರಿ ದರ್ಶನ ಪಡೆದರು. ಬಳಿಕ ಅರಮನೆಗೆ ಆಗಮಿಸಿ ರಾಜವಂಶಸ್ಥೆ ಶ್ರೀಪ್ರಮೋದಾ ದೇವಿ ಒಡೆಯರ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನ ಭರ್ತಿ ಮಾಡುವ ಕಾರ್ಯ ಶುರುವಾಗಿದೆ. ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆ ಖಾಲಿ ಇದ್ದು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಪಿಎಸ್ಐ ಅಕ್ರಮ ನೇಮಕಾತಿ ಕುರಿತು ನ್ಯಾಯಾಲಯದಲ್ಲಿ ಇಚಾರಣೆ ನಡೆಯುತ್ತಿದ್ದು, ನ್ಯಾಯಾಲಯ ಸರಕಾರದ ಅಭಿಪ್ರಾಯ ಕೇಳಿದೆ. ನ್ಯಾಯಾಲಯಕ್ಕೆ ಜುಲೈ 5ರಂದು ನಮ್ಮ ಅಭಿಪ್ರಾಯ ಹೇಳುತ್ತೇವೆ. ನಂತರ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಔರಾದ್ಕರ್ ವರದಿ ಈಗಾಗಲೆ ಅನುಷ್ಠಾನಕ್ಕೆ ತಂದಿದ್ದೇವೆ. ಈ ಹಿಂದೆ ನಮ್ಮ ಸರಕಾರ ಆಡಳಿತದಲ್ಲಿದ್ದಾಗ ಔರಾದ್ಕರ್ ವರದಿಯ ಬಗ್ಗೆ ಭಾಗಶಃ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಸಂಪೂರ್ಣ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಔರಾದ್ಕರ್ ವರದಿ ಯಥಾವತ್ ಜಾರಿ ಮಾಡಲು ಸಾಧ್ಯವಿಲ್ಲ ಎಂದರು.

ಪೊಲೀಸರಿಗೆ ವಾರದ ರಜೆ ಕೊಡಬೇಕು ಎಂಬುದು ನಮ್ಮ ಉದ್ದೇಶ. ಈ ಸಂಬಂಧ ಪ್ರಣಾಳಿಕೆಯಲ್ಲೂ ಹೇಳಲಾಗಿದೆ. ಇದು ಅವರಿಗೆ ಅವಶ್ಯಕ. ಅವರಿಗೆ ಮಾನಸಿಕವಾಗಿ ವಿಶ್ರಾಂತಿ ಸಿಗುತ್ತದೆ. ನಂತರ ಉತ್ತಮವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ವಿಶೇಷ ಭತ್ತೆ ನೀಡುವಲ್ಲಿ ಆದಷ್ಟು ಬೇಗ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಸುರಕ್ಷಿತ ಕ್ರಮವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡಿಲ್ಲ. ಹೈವೆಯಲ್ಲಿ ಯಾವುದೇ ಸೂಚನಾ ಫಲಕ ಅಳವಡಿಕೆ ಮಾಡಿಲ್ಲ, ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಈ ಬಂಧ ಎಡಿಜಿಪಿ ಮೌಖಿಕ ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಕೂಡ ನಡೆಯುತ್ತಿವೆ ಇದನ್ನು ತಡೆಯಲು ಕ್ರಮವಹಿಸಿದ್ದೇವೆ. ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್ ವಸೂಲಿ ಬೇಡ ಅಂತಾ ಸೂಚನೆ ಕೊಟ್ಟಿದ್ದೆವು. ಆದರೂ ಟೋಲ್ ವಸೂಲಿ ಶುರು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ಅವಸರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕರೆದು ಉದ್ಘಾಟನೆ ಮಾಡಿದರು. ರಾಜಕೀಯ ದುರುದ್ದೇಶದಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಹೀಗಾಗಿ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ. ಹೈವೆಯಲ್ಲಿ ಇಷ್ಟು ಬೇಗ ಅಷ್ಟು ಜನ ಸಾಯುತ್ತಾರೆ ಎಂದರೆ ಅದರ ಅರ್ಥ ಬಹಳ ಲೋಪವಾಗಿದೆ ಎಂದು. ಹೈವೆಯಲ್ಲಿ ಡ್ರಿಂಕ್ ಆ್ಯಂ ಡ್ ಡ್ರೈವ್ ವಿಚಾರ ಕ್ರಮ ವಹಿಸಲಾಗುತ್ತದೆ. ಜನರಿಗೆ ತೊಂದರೆ ಆಗದಂತೆ ಜನರ ಸುರಕ್ಷತೆಗೆ ಬೇಕಾದ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News