ನಿರ್ಭೀತಿಯಿಂದ ಸತ್ಯ ಎಲ್ಲೆಡೆಗೆ ತಲುಪಿಸುವ ಪತ್ರಿಕೆ ವಾರ್ತಾಭಾರತಿ: ಸಿದ್ದರಾಮಯ್ಯ
ಬೆಂಗಳೂರು: ಜನದನಿಯ ಸಾರಥಿ 'ವಾರ್ತಾಭಾರತಿ' ಕನ್ನಡ ದೈನಿಕದ 21ನೇ ವಾರ್ಷಿಕ ವಿಶೇಷಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಸಿದ್ದರಾಮಯ್ಯ,” ವಾರ್ತಾಭಾರತಿಯ 21ನೇ ವಾರ್ಷಿಕ ವಿಶೇಷಾಂಕವನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡುತ್ತೇನೆ. 21 ವರ್ಷಗಳ ಕಾಲ ವಸ್ತುನಿಷ್ಟ ಪತ್ರಿಕೋದ್ಯಮದ ಮೂಲಕ, ನಿರ್ಭೀತಿಯಿಂದ ಜನರ ಮುಂದೆ ನಿರಂತರ ಸತ್ಯ ವಿಚಾರ ಇಡುವ ಪ್ರಯತ್ನ ಮಾಡಿದ್ದಾರೆ. ಸಮಾಜಕ್ಕೆ ಅವಶ್ಯಕತೆ ಇರುವ ಸುದ್ದಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ವಾರ್ತಾಭಾರತಿ ” ಎಂದು ಶ್ಲಾಘಿಸಿದರು.
“ನಾನು ವಾರ್ತಾ ಭಾರತಿ ಪತ್ರಿಕೆಯನ್ನು ದಿನನಿತ್ಯ ಓದುತ್ತೇನೆ. ಈ ಪತ್ರಿಕೆ ಸತ್ಯ ಸುದ್ದಿಯನ್ನು ಸ್ವತಂತ್ರವಾಗಿ ನಿರ್ಭೀತಿಯಿಂದ ಹೇಳುತ್ತದೆ. ಸಂಪಾದಕೀಯದಲ್ಲಿ ಜ್ವಲಂತ ಸಮಸ್ಯೆ ಬಗ್ಗೆ ಹೇಳುತ್ತಾರೆ. ಪತ್ರಿಕೆ ಇನ್ನೂ ಒಳ್ಳೆಯ ಹೆಸರು ಮಾಡಲಿ” ಎಂದು ಸಿದ್ದರಾಮಯ್ಯ ಶುಭ ಹಾರೈಸಿದರು."ನಾಡಿನ ಜನರಿಗೆ ಎಲ್ಲ ವಿಷಯಗಳ ಬಗ್ಗೆ ಸತ್ಯ ಏನು ಎಂದು ಗೊತ್ತಿರುವುದಿಲ್ಲ. ಆದುದರಿಂದ ಪತ್ರಿಕೆಗಳು ವಸ್ತು ನಿಷ್ಠೆಯಿಂದ ಕೆಲಸ ಮಾಡಬೇಕು. ಕ್ಷುಲ್ಲಕ ವಿಚಾರಗಳಿಗೆ ಹೆಚ್ಚು ಮಹತ್ವ ನೀಡದೆ, ಸಮಾಜಕ್ಕೆ ಯಾವುದು ಅಗತ್ಯವಿದೆ, ಅಂತಹ ಸುದ್ದಿಗಳನ್ನು ಕೊಡುವಂತಹ ಪ್ರಯತ್ನ ಮಾಡಬೇಕು. ಈ ಹಾದಿಯಲ್ಲಿ ವಾರ್ತಾಭಾರತಿ ಸಾಗುತ್ತಿದೆ. ಯಾವುದೇ ವಿಚಾರ ಇರಲಿ, ವಾರ್ತಾಭಾರತಿ ನಿರ್ಭೀತಿಯಿಂದ ಹೇಳುವ ಪ್ರಯತ್ನ ಮಾಡುತ್ತದೆ. ಸಂಪಾದಕೀಯಗಳು ಬಹಳ ಉಪಯುಕ್ತವಾದದ್ದು. ಜ್ವಲಂತ ವಿಷಯಗಳ ಬಗ್ಗೆ ಲೇಖನಗಳ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಅನೇಕ ವಿಚಾರಗಳಲ್ಲಿ ಗೊಂದಲಗಳು ಇರುತ್ತವೆ. ಅಂತಹ ವಿಚಾರಗಳನ್ನು ಸ್ಪಷ್ಟವಾಗಿ ಜನರಿಗೆ ತಿಳಿಸುವ ಕೆಲಸವನ್ನು ವಾರ್ತಾಭಾರತಿ ಮಾಡುತ್ತಿದೆ" ಎಂದು ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
ವಾರ್ಷಿಕ ವಿಶೇಷಾಂಕದ ಮೊದಲ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಅವರು ವಾರ್ತಾಭಾರತಿ ಪತ್ರಿಕೆಯ ಓದುಗರ ಪ್ರತಿನಿಧಿಗಳಾದ ವಿದ್ಯಾರ್ಥಿ ಮದನ್, ಸ್ನೇಹ ಅವರಿಗೆ ನೀಡಿದರು.
ಅನಿವಾಸಿ ಭಾರತೀಯ ಉದ್ಯಮಿ, ಸಂವಹನ ಕ್ಯಾಂಪೈನ್ಸ್ ಪ್ರೈ ಲಿ. ನ ನಿರ್ದೇಶಕ ನಾಸಿರ್ ಸೈಯದ್ ಅವರು ಪತ್ರಿಕಾ ಬಳಗದ ಪರವಾಗಿ ಸಿಎಂಗೆ ಸ್ಮರಣಿಕೆ ನೀಡಿದರು.
'ವಾರ್ತಾಭಾರತಿ' ಪ್ರಧಾನ ಸಂಪಾದಕರಾದ ಎ.ಎಸ್.ಪುತ್ತಿಗೆ ಅವರು ಬರೆದ ‘ಫೆಲೆಸ್ತೀನ್ ನಲ್ಲಿ ನಡೆಯುತ್ತಿರುವುದೇನು?’ ಪುಸ್ತಕವನ್ನು ಬ್ಯಾರಿಸ್ ಗ್ರೂಪ್ ನ ನಿರ್ದೇಶಕ ಸಿದ್ದಿಕ್ ಬ್ಯಾರಿ ಅವರು ಸಿಎಂಗೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ. ಅತೀಖ್, ಸಿಎಂ ಆಪ್ತ ಕಾರ್ಯದರ್ಶಿ ನೆಲ್ಲುಕುಂಟೆ ವೆಂಕಟೇಶ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಎಸ್ಸಿ ಎಂಟರ್ ಪ್ರೈಸಸ್ ಮುದ್ರಣ ಸಂಸ್ಥೆಯ ಪಾಲುದಾರರಾದ ಶಶಿಧರ್ ಹಾಗು ಚಂದ್ರಶೇಖರ್, 'ವಾರ್ತಾಭಾರತಿ' ಪ್ರಧಾನ ಸಂಪಾದಕ ಎ.ಎಸ್.ಪುತ್ತಿಗೆ, ಪತ್ರಿಕೆಯ ನಿರ್ದೇಶಕ ಎಸ್.ಎಂ.ಅಲಿ ಉಪಸ್ಥಿತರಿದ್ದರು. ವಾರ್ತಾಭಾರತಿ ಬೆಂಗಳೂರು ಬ್ಯೂರೋ ಮುಖ್ಯಸ್ಥ ಪ್ರಕಾಶ್ ಸಿ.ರಾಮಜೋಗಿಹಳ್ಳಿ ಸ್ವಾಗತಿಸಿದರು. ಪತ್ರಿಕೆಯ ಹಿರಿಯ ವರದಿಗಾರ ಅಮ್ಜದ್ ಖಾನ್ ಎಂ. ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕದ ಇ ಪೇಪರ್ ಲಿಂಕ್: https://www.ezinemart.com/varthabharati/index.php?pagedate=21thannual