ಶೀಘ್ರದಲ್ಲೇ ವಿಜಯಪುರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಚುನಾವಣೆ; 7 ಸದಸ್ಯರು ಕಾಂಗ್ರೆಸ್ ತೆಕ್ಕೆಗೆ

Update: 2023-10-11 11:10 GMT

ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆಯ 7 ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಅವರ ಬೆಂಗಳೂರಿನ ನಿವಾಸದಲ್ಲಿ ಬುಧವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.  

ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯರಾದ ಅಶೋಕ ನ್ಯಾಮಗೌಡ, ವಿಮಲಾ ರಫೀಕ್ ಕಾನೆ, ಅಲ್ತಾಫ್ ಇಟಗಿ, ಜೆಡಿಎಸ್ ಸದಸ್ಯೆ ಸುಮಿತ್ರಾ ರಾಜು ಜಾದವ, ಎಂಐಎಂಐಎಂ ನ ಕೈಸರ್ ಇನಾಮದಾರ ಮತ್ತು ಸೂಫಿಯಾ ವಾಟಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.  ಪಾಲಿಕೆಯ ಮತ್ತೋರ್ವ ಸದಸ್ಯೆ ಕೂಡ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ.  ಆದರೆ, ಅವರು ಕಾರಣಾಂತರಗಳಿಂದ ಬಂದಿರಲಿಲ್ಲ.  

ಒಟ್ಟು 35 ಸದಸ್ಯರನ್ನು ಹೊಂದಿರುವ ಪಾಲಿಕೆಯಲ್ಲಿ 10 ಜನ ಕಾಂಗ್ರೆಸ್ ಸದಸ್ಯರಿದ್ದಾರೆ.  ಈ ಸೇರ್ಪಡೆಯೊಂದಿಗೆ ಈಗ ಕಾಂಗ್ರೆಸ್ ಕಾರ್ಪೋರೇಟರ್ ಗಳ ಸಂಖ್ಯೆ 18ಕ್ಕೇರಿದೆ.  ಅಲ್ಲದೇ, ತಲಾ ಇಬ್ಬರು ಶಾಸಕರು ಹಾಗೂ ವಿಧಾನ ಪರಿಷತ ಸದಸ್ಯರು ಸೇರಿದಂತೆ ಕಾಂಗ್ರೆಸ್ ಸದಸ್ಯರ ಒಟ್ಟು ಸಂಖ್ಯೆ 22ಕ್ಕೆೇ ಏರಿದಂತಾಗಿದೆ.  ಇದರಿಂದಾಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಂತಾಗಿದೆ.  ಇದರಿಂದಾಗಿ ಸದ್ಯದಲ್ಲೇ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ಸಿನ ಗೆಲುವು ನಿಚ್ಚಳವಾಗಿದೆ.

ಸಚಿವ ಎಂ. ಬಿ. ಪಾಟೀಲ ಅವರು ಕಳೆದ ಎರಡು ವಾರಗಳಿಂದ ಅಮೆರಿಕದಲ್ಲಿ ಅಧಿಕೃತ ಪ್ರವಾಸದಲ್ಲಿದ್ದರು.  ಅವರು ಬುಧವಾರ ಬೆಂಗಳೂರಿಗೆ ಮರಳುತ್ತಿದ್ದಂತೆಯೇ ಈ ವಿದ್ಯಮಾನ ನಡೆದಿದೆ.  ಸ್ವತಃ ಎಂ. ಬಿ. ಪಾಟೀಲ ಮತ್ತು ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಈ ಸದಸ್ಯರನ್ನು ಶಾಲು ಹಾಕಿ, ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದರು.

ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಸಚಿವ ಎಂ. ಬಿ. ಪಾಟೀಲ್, ಕಾಂಗ್ರೆಸ್ ಮಾತ್ರ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವ ಸಾಮರ್ಥ್ಯ ಹೊಂದಿದೆ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿದೆ.  ಹೀಗಾಗಿ ಪಕ್ಷೇತರರು ಮತ್ತು ಇನ್ನುಳಿದ ಪಕ್ಷಗಳ ಸದಸ್ಯರು ತಾವಾಗಿಯೇ ನಮ್ಮ ಪಕ್ಷಕ್ಕೆ ಬಂದಿದ್ದಾರೆ.  ಇವರನ್ನೆಲ್ಲ ನಾನು ಸ್ವಾಗತಿಸುತ್ತೇನೆ.  ಮುಂಬರುವ ದಿನಗಳಲ್ಲಿ ವಿಜಯಪುರ ನಗರಕ್ಕೆ ನಮ್ಮಿಂದ ಸಮರ್ಥ ಆಡಳಿತ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ʼʼಕಾಂಗ್ರೆಸ್ಸಿನ ಗೆಲುವು ಖಚಿತʼʼ

ʼʼವಿಜಯಪುರ ಮಹಾನಗರ ಪಾಲಿಕೆಯ 7 ಸದಸ್ಯರು ಬೆಂಗಳೂರಿನ ನಮ್ಮ ನಿವಾಸದಲ್ಲಿ ಇಂದು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು. ಇನ್ನೋರ್ವ ಸದಸ್ಯರು ಕೂಡ ನಮ್ಮ ಪಕ್ಷ ಸೇರಲು ತೀರ್ಮಾನಿಸಿದ್ದು, ಕಾರಣಾಂತರಗಳಿಂದ ಅವರು ಬಂದಿರಲಿಲ್ಲ. ಇದರೊಂದಿಗೆ, 35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ಸಿನ ಬಲ 18ಕ್ಕೆ ಏರಿದಂತಾಗಿದೆ. ಜತೆಗೆ ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿ ಪಕ್ಷದ ಬಲ 22ಕ್ಕೇರಲಿದೆ. ಸದ್ಯದಲ್ಲೇ ನಡೆಯಲಿರುವ ಮೇಯರ್ ಸ್ಥಾನದ ಚುನಾವಣೆಯಲ್ಲಿ, ಕಾಂಗ್ರೆಸ್ಸಿನ ಗೆಲುವು ನಿಚ್ಚಳವಾಗಿದೆʼʼ ಎಂದು ಸಚಿವ ಎಂ.ಬಿ ಪಾಟೀಲ್‌ ಅವರು ಟ್ವಟರ್‌ ನಲ್ಲಿ ಪೋಸ್ಟರ್‌ ಮಾಡಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News