ವಿಜಯಪುರ | ವಿದ್ಯುತ್ ವಿತರಣಾ ಕೇಂದ್ರಕ್ಕೆ ಮೊಸಳೆಯೊಂದಿಗೆ ಬಂದ ರೈತರು!
ವಿಜಯಪುರ, ಅ. 20: ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೇಸತ್ತ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ್ ಗ್ರಾಮದ ರೈತರು, ಸ್ಥಳೀಯ ವಿದ್ಯುತ್ ವಿತರಣಾ ಘಟಕದ ಆವರಣಕ್ಕೆ ಮೊಸಳೆ ತಂದು ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಧನ ಇಲಾಖೆ ಅಧಿಕಾರಿಗಳು ಪ್ರತಿನಿತ್ಯ ತಡರಾತ್ರಿ ತ್ರಿಫೇಸ್ ವಿದ್ಯುತ್ ನೀಡುತ್ತಿದ್ದು, ಹೊಲ-ಗದ್ದೆಗೆ ನೀರು ಹರಿಸಬೇಕು. ಆದರೆ, ಮೊಸಳೆ ಸೇರಿ ಹಲವಾರು ಕಾಡು ಪ್ರಾಣಿಗಳ ಹಾವಳಿ ಇರುತ್ತದೆ. ಹೀಗಾಗಿ ನಮಗೇನಾದರೂ ಸಮಸ್ಯೆಯಾದರೆ ಯಾರು ಹೊಣೆ? ರಾತ್ರಿ ತ್ರಿಫೇಸ್ ವಿದ್ಯುತ್ ನೀಡುವುದರಿಂದ ನಮಗೆ ಲಾಭವಿಲ್ಲ ಎಂದು ರೈತರು, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಗುರುವಾರ ರಾತ್ರಿ ಬೆಳೆಗಳಿಗೆ ನೀರು ಹರಿಸಲು ಹೋದಾಗ ರೈತರೊಬ್ಬರ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಅದೇ ಮೊಸಳೆಯನ್ನು ಹಿಡಿದ ರೈತರು, ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದಿದ್ದರು. ಕೊನೆಗೆ ಇಂಧನ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮನವೊಲಿಸಿದ್ದು, ರೈತರು ಮೊಸಳೆ ತೆಗೆದುಕೊಂಡು ಹೋದರು.