ಮುಖ್ಯಮಂತ್ರಿಗಳೇ, ಸಾವಿರಾರು ಕೋಟಿ ರೂ. ಲೂಟಿ ಬಗ್ಗೆ ಒಪ್ಪಿಕೊಂಡು ರಾಜೀನಾಮೆ ಕೊಡಿ : ವಿಜಯೇಂದ್ರ

Update: 2024-08-10 13:13 GMT

ಮೈಸೂರು: ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ. ಮುಖ್ಯಮಂತ್ರಿಗಳೇ ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸವಾಲು ಹಾಕಿದರು.

ಕಾಂಗ್ರೆಸ್ ಸರಕಾರದ ಹಗರಣಗಳನ್ನು ಖಂಡಿಸಿ ಬಿಜೆಪಿ- ಜೆಡಿಎಸ್ ವತಿಯಿಂದ ನಡೆದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, "ಮುಡಾ ಹಗರಣದಲ್ಲಿ 5 ಸಾವಿರ ಕೋಟಿಯ ಅವ್ಯವಹಾರ ಆಗದೆ ಇದ್ದರೆ ನೀವ್ಯಾಕೆ ಸದನದಿಂದ ಓಡಿಹೋಗಿದ್ದೀರಿ?. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ವಿಪಕ್ಷಕ್ಕೆ ಗೊಡ್ಡು ಬೆದರಿಕೆ ಹಾಕಿದ್ದು ಯಾಕೆ?. ಮೊದಲು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿವರ ಕೊಡಿ. ಮುಖ್ಯಮಂತ್ರಿಗಳೇ, ಸಾವಿರಾರು ಕೋಟಿ ರೂ. ಲೂಟಿ ಬಗ್ಗೆ ಒಪ್ಪಿಕೊಂಡು ರಾಜೀನಾಮೆ ಕೊಡಿ" ಎಂದು ಒತ್ತಾಯಿಸಿದರು

ಗೌರವಧನ/ಮಾಸಾಶನ ಕೊಟ್ಟಿಲ್ಲ :

ಬಡವರು, ರೈತರನ್ನು ಕಾಪಾಡುವ ಇಚ್ಛಾಶಕ್ತಿ ನಿಮ್ಮಲ್ಲಿಲ್ಲ. ನಮ್ಮ ಬಿಜೆಪಿ ಸರಕಾರ ಮನೆ ಬಿದ್ದ ಸಂದರ್ಭದಲ್ಲಿ 5 ಲಕ್ಷ ರೂ. ಕೊಟ್ಟಿತ್ತು. ಈ ಸರಕಾರ 1 ಲಕ್ಷ ರೂ. ಕೊಡುವುದಾಗಿ ಘೋಷಿಸಿದೆ. ಆದರೆ, ಅದನ್ನೂ ಕೊಟ್ಟಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ 2 ತಿಂಗಳಿಂದ ಗೌರವಧನ ಸಿಕ್ಕಿಲ್ಲ. ಅಂಗವಿಕಲರಿಗೆ 6 ತಿಂಗಳಿಂದ ಮಾಸಾಶನ ಕೊಟ್ಟಿಲ್ಲ ಎಂದು ಟೀಕಿಸಿದರು.

ಮುಖವಾಡ ಕಳಚಿಬಿದ್ದಿದೆ :

ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿಬಿದ್ದಿದೆ. ಪೊಲೀಸರನ್ನು ಉಪಯೋಗಿಸಿ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದೀರಿ. ಅಧಿವೇಶನದಲ್ಲಿ ವಾಲ್ಮೀಕಿ ನಿಗಮದ ಹಗರಣ, ಮುಡಾದ ಹಗರಣ ಕುರಿತು ಚರ್ಚಿಸಲು ಮುಂದಾದರೆ, ನಿಲುವಳಿ ಸೂಚನೆ ಮಂಡಿಸಿದರೆ, ವಿಪಕ್ಷದ ಕಿವಿಗೆ ಹೂ ಮುಡಿಸುವ ಕೆಲಸ ಮಾಡಿದರು ಎಂದು ಆಕ್ಷೇಪಿಸಿದರು.

ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ:

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ನಿಮ್ಮಲ್ಲಿ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ. ಆಗ ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸದಿಂದ ನುಡಿದರು.

ಸಿದ್ದರಾಮಯ್ಯನವರೇ ನನ್ನ ಬದುಕಿನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿದ್ದು, ನಿಮ್ಮನ್ನು ಮನೆಗೆ ಕಳಿಸುವೆ. ಈ ಸರಕಾರ ದಿವಾಳಿ ಆಗಿದೆ. ದಿವಾಳಿ ಸ್ಥಿತಿಯಲ್ಲಿರುವ ನೀವು ಮನ ಬಂದಂತೆ ಮಾತನಾಡುತ್ತೀರಿ ಎಂದು ಟೀಕಿಸಿದರು.

ಸಮಾವೇಶದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್‌ದಾಸ್ ಅಗ್ರವಾಲ್, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್‌.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೊದಲಾದವರು ವೇದಿಕೆಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News