ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ | ಕುಟುಂಬ ರಾಜಕಾರಣದ ಪ್ರಶ್ನೆ ನನ್ನನ್ನೂ ಕಾಡುತ್ತಿದೆ ಎಂದ ಸಿ.ಟಿ. ರವಿ

Update: 2023-11-12 05:35 GMT

ಬೆಂಗಳೂರು: 'ಕುಟುಂಬ ರಾಜಕಾರಣದ ಪ್ರಶ್ನೆ ನನ್ನನ್ನೂ ಕಾಡುತ್ತಿದೆ' ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ. 

ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡುವುದರಿಂದ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯನ್ನು ಬಿಜೆಪಿ ಕಳೆದುಕೊಂಡಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು. 

'ಕುಟುಂಬ ರಾಜಕಾರಣದ ಬಗ್ಗೆ ನಿಮ್ಮನ್ನು (ಪತ್ರಕರ್ತರನ್ನು) ಕಾಡುತ್ತಿರುವ ಪ್ರಶ್ನೆ ಅದು ನನ್ನನ್ನೂ ಕಾಡುತ್ತಿದೆ. ಆದರೆ, ಅದಕ್ಕೆ ಉತ್ತರ ಕೊಡಲು  ಇದು ಸೂಕ್ತ ಸಂದರ್ಭ ಅಲ್ಲ' ಎಂದು ಅವರು ಹೇಳಿದರು. 

''ನನಗೆ ಯಾವುದೇ ಅಸಮಾಧಾನವಿಲ್ಲ''

''ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಆಗಿರಲಿಲ್ಲ. ಹೀಗಾಗಿ ನನಗೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಗುರಿ 2024ರ ಲೋಕಸಭೆ ಚನಾವಣೆಯಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎನ್ನುವುದಾಗಿದೆ. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಆ ನಿಟ್ಟಿನಲ್ಲಿ ಮಾತ್ರ ನಮ್ಮ ಗಮನ ಇರಲಿದೆ'' ಎಂದು ಸಿ.ಟಿ.ರವಿ ನುಡಿದರು.‘

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹ, ಯೋಗ್ಯತೆ ಪಕ್ಷದಲ್ಲಿ ಬಹಳಷ್ಟು ಜನರಿಗಿದೆ. ಆದರೆ ಯಾವ ಸಂದರ್ಭಕ್ಕೆ ಯಾರು ಸೂಕ್ತ ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಈಗ ಅದನ್ನೇ ವರಿಷ್ಠರು ಮಾಡಿದ್ದಾರೆ ಎಂದ ಅವರು, ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರರಿಗೆ ಈಗಾಗಲೇ ಅಭಿನಂದನೆ ಸಲ್ಲಿಸಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನ ಎನ್ನುವುದು ಅಧಿಕಾರವಲ್ಲ ಜವಾಬ್ದಾರಿ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News