ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದವರ ಬಂಧನಕ್ಕೆ ವಿಜಯೇಂದ್ರ ಆಗ್ರಹ

Update: 2024-01-23 14:08 GMT

ಬೆಂಗಳೂರು: ಕಲಬುರಗಿಯ ಲುಂಬಿಣಿ ಉದ್ಯಾನದಲ್ಲಿನ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಉಂಟುಮಾಡಿ ವಿಕೃತಿ ಮೆರೆದಿರುವುದು ಹೇಡಿಗಳ ನೀಚ ಕೃತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಸರಕಾರ ಈ ಕೂಡಲೇ ಬಂಧಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಇದರಿಂದ ಕಲಬುರಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹದಗೆಡುತ್ತಿದ್ದು ಪರಿಸ್ಥಿತಿಯ ಗಂಭೀರತೆ ಅರಿತು ನಗರದ ಶಾಂತಿಗೆ ಭಂಗ ಉಂಟಾಗದಂತೆ ಹಾಗೂ ಜನರ ಆಕ್ರೋಶ ಇನ್ನಷ್ಟು ವ್ಯಾಪಿಸದಂತೆ ಪೊಲೀಸರು ಈ ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ವಿಶೇಷ ಎಚ್ಚರಿಕೆಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದ ಕಾಂಗ್ರೆಸ್ ಸರಕಾರ, ಬಾಬಾ ಸಾಹೇಬರ ಪುತ್ಥಳಿಗೂ ರಕ್ಷಣೆ ನೀಡಲಾಗದಷ್ಟು ದುರ್ಬಲವಾಗಿದೆ ಎಂದರೆ ಇದರ ನೈತಿಕ ಹೊಣೆ ಯಾರು ಹೊರಬೇಕೆಂದು ಸರಕಾರವೇ ನಿರ್ಧರಿಸಲಿ. ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಎನ್ನುವುದನ್ನು ಈ ಘಟನೆ ಸಾಕ್ಷೀಕರಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ಮಾನವತಾವಾದಿಯ ಪುತ್ಥಳಿಗೆ ಸುರಕ್ಷತೆ ಒದಗಿಸಲಾಗದ ಕಾಂಗ್ರೆಸ್ ಸರಕಾರ ಸಂವಿಧಾನ ರಕ್ಷಣೆ ಆಶ್ರಯಿಸುವ ಸಾಮಾನ್ಯ ನಾಗರಿಕರಿಗೆ ಯಾವ ಬಗೆಯ ರಕ್ಷಣೆ ನೀಡಲು ಸಾಧ್ಯ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News