ವಿಜಯೇಂದ್ರ ಪಕ್ಷ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ : ರಮೇಶ್ ಜಾರಕಿಹೊಳಿ
ಹೊಸದಿಲ್ಲಿ : ವಿಜಯೇಂದ್ರ ಪಕ್ಷ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಮೊದಲು ಅವರಿಗೆ ನೋಟಿಸ್ ಕೊಡಬೇಕು. ತಾವೇ ಅಧ್ಯಕ್ಷರಾಗಿ ಎಲ್ಲಾ ಜಿಲ್ಲಾಧ್ಯಕ್ಷರುಗಳಿಂದ ಸಹಿ ತಗೊಂಡಿದ್ದಾರೆ. ಆ ಬಳಿಕ ಅದರ ಮೇಲೆ ಯತ್ನಾಳ್ ಉಚ್ಚಾಟನೆ ಮಾಡುವಂತೆ ಪತ್ರ ಬರೆದಿದ್ದಾರೆ. ಹೀಗಾಗಿ ಅವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಜಾರಕಿಹೊಳಿ ಆಗ್ರಹಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ದೆಹಲಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, ನಾವು ಯಾವುದೇ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ವಕ್ಪ್ ಹೋರಾಟ ಕೆಡೆಸುವ ಕೆಲಸ ಮಾಡಿದ್ದು ವಿಜಯೇಂದ್ರ ಅವರ ಗುಂಪು. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರೇ ಪಕ್ಷ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ವಕ್ಪ್ ವರದಿ ಸಲ್ಲಿಸಲು ಬಂದಿದ್ದೇವೆ :
ಜೆಪಿಸಿ ಅಧ್ಯಕ್ಷರ ಭೇಟಿ ಮಾಡಿ ವಕ್ಪ್ ವರದಿ ಸಲ್ಲಿಸಲು ಬಂದಿದ್ದೇವೆ. ಇದರ ಜೊತೆಗೆ ಉಳಿದ ವಿಷಯಗಳ ಬಗ್ಗೆಯೂ ವರಿಷ್ಠರ ಜೊತೆ ಚರ್ಚೆ ಮಾಡುತ್ತೇವೆ. ಇವತ್ತು ಹಾಗೂ ಡಿ.5ರಂದು ಜೆಪಿಸಿ ಅಧ್ಯಕ್ಷರ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.
ಯತ್ನಾಳ್ ಅವರಿಗೆ ಪಕ್ಷದ ಶಿಸ್ತು ಸಮಿತಿಯ ಅಧ್ಯಕ್ಷರಿಂದ ನೋಟಿಸ್ ಬಂದಿರುವುದು ನಿಜ. ಯತ್ನಾಳ್ ಅವರು ನಾಳೆ 11.30ಕ್ಕೆ ಸಮಿತಿ ಮುಂದೆ ಹಾಜರಾಗುತ್ತಾರೆ. ಎಲ್ಲದಕ್ಕೂ ಅವರೇ ಉತ್ತರ ಕೊಡುತ್ತಾರೆ ಎಂದರು.