ಚಿಕ್ಕಮಗಳೂರು: ಸ್ವಾತಂತ್ರ್ಯ ಸಿಕ್ಕ 75 ವರ್ಷಗಳ ಬಳಿಕ ಸರಕಾರಿ ಬಸ್ ಸೇವೆ ಕಂಡ ಹೊಯ್ಸಲಳು ಗ್ರಾಮ!

Update: 2023-06-26 13:36 GMT

ಚಿಕ್ಕಮಗಳೂರು, ಜೂ.26: ರಾಜ್ಯವನ್ನಾಳಿದ ಹಲವು ರಾಜ ಮನೆತನಗಳಲ್ಲಿ ಹೊಯ್ಸಳ ಮನೆತನ ಕೂಡ ಒಂದು. ಇಂತಹ ಹೊಯ್ಸಳ ರಾಜರ ಮೂಲ ಸ್ಥಾನವಾದ ಹೊಯ್ಸಳಲು ಗ್ರಾಮ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಮೊದಲ ಬಾರಿಗೆ ಸರಕಾರಿ ಬಸ್ ಕಂಡಿದೆ. ಹಲವು ದಶಕಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ತಮ್ಮ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಬಂದ ಕೆಎಸ್ಸಾರ್ಟಿಸಿ ಬಸ್ ಕಂಡ ಗ್ರಾಮದಲ್ಲೀಗ ಸಂಭ್ರಮ ಮನೆ ಮಾಡಿದೆ.

ಹೊಯ್ಸಳ ರಾಜಮನೆತನ ನಾಡಿನ ಹೆಮ್ಮೆಯ ರಾಜಮನೆತನಗಳಲ್ಲಿ ಒಂದಾಗಿದೆ. ಇಂತಹ ರಾಜಮನೆದ ಮೂಲ ಸ್ಥಾನ ಇರುವುದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಯ್ಸಳ ಗ್ರಾಮದಲ್ಲಿ. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು ಇಂದಿಗೂ ಈ ಗ್ರಾಮದಲ್ಲಿದೆ. ಸಮರ್ಪಕ ಸಾರಿಗೆ ಸೌಲಭ್ಯದ ಕೊರತೆಯಿಂದಾಗಿ ಹೊಯ್ಸಳಲು ಗ್ರಾಮ ಪ್ರವಾಸಿ ಕೇಂದ್ರವಾಗಿದ್ದರೂ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿತ್ತು.

ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಹೊಯ್ಸಳ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಕೆಸ್ಸಾರ್ಟಿಸಿ ಬಸ್‍ನ ಸೌಲಭ್ಯವೇ ಇರಲಿಲ್ಲ. ಈ ಗ್ರಾಮದ ನಿವಾಸಿಗಳು, ಶಾಲಾ ಕಾಲೇಜು ಮಕ್ಕಳು ಆಟೊ, ಜೀಪ್ ಮೂಲಕ ಮೂಡಿಗೆರೆ ಪಟ್ಟಣಕ್ಕೆ ಬರಬೇಕಿತ್ತು. ಗ್ರಾಮಕ್ಕೆ ಸರಕಾರಿ ಬಸ್‍ನ ಸೌಲಭ್ಯ ಒದಗಿಸಬೇಕೆಂದು ಹಲವು ದಶಕಗಳಿಂದ ಗ್ರಾಮದ ನಿವಾಸಿಗಳು, ಮುಖಂಡರು ಸಾರಿಗೆ ಇಲಾಖೆ ಅಧಿಕಾರಿಗಳೂ ಸೇರಿದಂತೆ ಹಿಂದಿನ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಗ್ರಾಮಸ್ಥರ ಸರಕಾರಿ ಬಸ್ ಸೇವೆಯ ಕನಸು ಮಾತ್ರ ನನಸಾಗಿರಲಿಲ್ಲ.

ಈ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳಿದ್ದು, ಕಾಡಂಚಿನ ಈ ಕುಗ್ರಾಮ ಎಲ್ಲ ರೀತಿಯ ಮೂಲಭೂತ ಸಮಸ್ಯೆಗಳಿಂದ ವಂಚಿತ ಗ್ರಾಮವಾಗಿದೆ. 75 ವರ್ಷಗಳಿಂದ ಅನೇಕ ಸರಕಾರಗಳು ಬಂದು ಹೋದರೂ ಈ ಗ್ರಾಮ ಸರಕಾರ ಬಸ್ ಕಂಡಿರಲಿಲ್ಲ. ಗ್ರಾಮದ ಇತರ ಸಮಸ್ಯೆಗಳಿಗೂ ಯಾವ ಸರಕಾರಗಳೂ ಸ್ಪಂದಿಸಿರಲಿಲ್ಲ. ಬಡವರು-ಕೂಲಿ ಕಾರ್ಮಿಕರೇ ಹೆಚ್ಚಿರುವ ಈ ಗ್ರಾಮದ ನಿವಾಸಿಗಳು ಮೂಲಭೂತ ಸೌಲಭ್ಯ ಹಾಗೂ ಸರಕಾರಿ ಬಸ್‍ನ ಸೇವೆಗೆ ಹಲವು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದರು. ಈ ಸಂಬಂಧ ಅನೇಕ ಬಾರಿ ಧರಣಿ, ಪ್ರತಿಭಟನೆಗಳನ್ನೂ ಮಾಡಿದ್ದರು. ಇದಕ್ಕೆ ಸರಕಾರ, ಜನಪ್ರತಿನಿಧಿಗಳಿಂದ ಭರವಸೆ ಸಿಗುತ್ತಿತ್ತೇ ಹೊರತು ಬೇಡಿಕೆ ಮಾತ್ರ ಈಡೇರಿರಲಿಲ್ಲ. ಬಿಸಿಲು, ಮಳೆ, ಚಳಿ ಗಾಳಿ ಎನ್ನದೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು 5 ಕಿ.ಮೀ ನಡೆದುಕೊಂಡು ಬಂದು ಬಸ್ ಹಿಡಿದು ಶಾಲಾ, ಕಾಲೇಜು, ಕಚೇರಿಗಳಿಗೆ ಹೋಗಬೇಕಾಗಿತ್ತು.

ತಮ್ಮ ಗ್ರಾಮದ ಮುಖ್ಯ ಸಮಸ್ಯೆಯಾಗಿದ್ದ ಸರಕಾರಿ ಬಸ್ ಸೇವೆಯ ಬೇಡಿಕೆ ಸಂಬಂಧ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಓಟು ಕೇಳಲು ಬಂದಿದ್ದ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಬಳಿ ಹೇಳಿಕೊಂಡಿದ್ದ ಗ್ರಾಮಸ್ಥರು ಚುನಾವಣೆಯಲ್ಲಿ ಗೆದ್ದಲ್ಲಿ ಗ್ರಾಮಕ್ಕೆ ಸರಕಾರಿ ಬಸ್‍ನ ಸೇವೆ ಒದಗಿಸಬೇಕೆಂದು ಮನವಿ ಮಾಡಿದ್ದರು. ಚುನಾವಣೆ ಬಳಿಕ ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ನಯನಾ ಮೋಟಮ್ಮ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು. ನೂತನ ಶಾಸಕಿಯಾಗಿ ಆಯ್ಕೆಯಾದ ನಯನಾ ಮೋಟಮ್ಮ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದ ಗ್ರಾಮಸ್ಥರು ತಮ್ಮ ಹಲವು ದಶಕಗಳ ಬೇಡಿಕೆ ಇಡೇರಿಸಬೇಕೆಂದು ಆಗ್ರಹಿಸಿದ್ದರು.

ಇದಕ್ಕೆ ಕೂಡಲೇ ಸ್ಪಂದಿಸಿದ ಶಾಸನ ನಯನಾ ಮೋಟಮ್ಮ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹೊಯ್ಸಳಲು ಗ್ರಾಮಕ್ಕೆ ನೂತನ ಬಸ್ ಸಂಚಾರವನ್ನೂ ಕಳೆದ ಎರಡು ದಿನಗಳ ಹಿಂದೆ ಆರಂಭಿಸಿದ್ದರು.

ಇದೀಗ ಹೊಯ್ಸಳಲು ಗ್ರಾಮಕ್ಕೆ ಪ್ರತಿನಿತ್ಯ ಸರಕಾರಿ ಬಸ್ ಸಂಚಾರ ಸೇವೆ ಆರಂಭವಾಗಿದ್ದು, ತಮ್ಮ ಗ್ರಾಮಕ್ಕೆ ಬಂದ ಬಸ್ ಅನ್ನು ಗ್ರಾಮಸ್ಥರು ತಳಿರು ತೋರಣಗಳನ್ನ ಕಟ್ಟಿ ಸ್ವಾಗತಿದ್ದಾರೆ. ಬಸ್ಸಿನ ಬಾಗಿಲಿಗೆ ಟೇಪ್ ಕಟ್ಟಿ, ಟೇಪ್ ಕತ್ತರಿಸುವ ಮೂಲಕ ಮತ್ತೆಂದು ನಿಲ್ಲದಿರಲಿ ಎಂದು ಸಂಚಾರಕ್ಕೆ ಅಡಿ ಇಟ್ಟಿದ್ದಾರೆ. ಹೊಯ್ಸಳಲು ಗ್ರಾಮಕ್ಕೆ ಸರಕಾರಿ ಬಸ್ ಸೇವೆ ಸಿಕ್ಕಿರುವುದರಿಂದ ಶಕ್ತಿ ಯೋಜನೆಯ ಲಾಭವೂ ಈ ಭಾಗದ ಬಡ ವರ್ಗದ ಮಹಿಳೆಯವರಿಗೆ ಅನುಕೂಲವಾಗಿದೆ. ಗ್ರಾಮಕ್ಕೆ ಪ್ರತಿದಿನ ಸಂಚಾರ ಮಾಡುತ್ತಿರುವ ಬಸ್‍ನಲ್ಲಿ ಗ್ರಾಮಸ್ಥರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ನಗುಮುಖದಿಂದ ಪ್ರಯಾಣ ಆರಂಭಿಸಿದ್ದಾರೆ.

''ಹೊಯ್ಸಳ ಗ್ರಾಮಕ್ಕೆ ಸರಕಾರಿ ಬಸ್ ಸೇವೆ ಒದಗಿಸುವಂತೆ ಹಲವು ದಶಕಗಳಿಂದ ಹೋರಾಟ ಮಾಡಿದ್ದೇವೆ. ಹಿಂದಿನ ಜನಪ್ರತಿನಿಧಿಗಳು, ಅಧಿಕಾರಿಗಳು ಕೇವಲ ಭರವಸೆ ನೀಡುತ್ತಿದ್ದರು. ಇದುವರೆಗೂ ನಮ್ಮ ಗ್ರಾಮಕ್ಕೆ ಸರಕಾರಿ ಬಸ್ ಬಂದಿರಲಿಲ್ಲ. ಸದ್ಯ ನಯನಾ ಮೋಟಮ್ಮ ಅವರಿಂದಾಗಿ ನಮ್ಮ ಗ್ರಾಮ ಸರಕಾರಿ ಬಸ್ ನೋಡುವಂತಾಗಿದೆ. ಸರಕಾರಿ ಬಸ್ ಸೇವೆಯಿಂದಾಗಿ ಗ್ರಾಮಸ್ಥರು, ಶಾಲಾ ಕಾಲೇಜು ಮಕ್ಕಳಿಗೆ ಭಾರೀ ಅನುಕೂಲವಾಗಿದೆ. ಬಡವರ್ಗದವರು ನಡೆದಾಡುವುದು ತಪ್ಪಿದೆ. ಶಕ್ತಿ ಯೋಜನೆ ಸೌಲಭ್ಯವೂ ನಮ್ಮ ಗ್ರಾಮದ ಮಹಿಳೆಯರಿಗೆ ಸಿಕ್ಕಂತಾಗಿದೆ. ಮಲೆನಾಡಿನಲ್ಲಿ ಇಂತಹ ಅನೇಕ ಕುಗ್ರಾಮಗಳಿಗೆ ಸರಕಾರಿ ಬಸ್ ಸೇವೆ ಇಲ್ಲದಂತಾಗಿದ್ದು, ಸರಕಾರ ಮಲೆನಾಡಿನ ಇಂತಹ ಗ್ರಾಮಗಳನ್ನು ಗುರುತಿಸಿ ಸರಕಾರಿ ಬಸ್ ಸಂಚಾರ ಆರಂಭಿಸಿದರೇ ಬಡವರ್ಗದವರಿಗೆ ಅನುಕೂಲವಾಗಲಿದೆ''

- ರಮೇಶ್, ಹೊಯ್ಸಳಲು ಗ್ರಾಮದ ನಿವಾಸಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News