ವಿರಾಜಪೇಟೆ: ಮೂವರ ಮೇಲೆ ದಾಳಿ ಮಾಡಿದ್ದ ಕಾಡಾನೆ ಸೆರೆ, ಬಂಡೀಪುರಕ್ಕೆ ಸ್ಥಳಾಂತರ
ಮಡಿಕೇರಿ ಜೂ.25 : ವಿರಾಜಪೇಟೆ ತಾಲ್ಲೂಕಿನ ಅಮ್ಮತಿ ಸಮೀಪ ಒಂಟಿಯಂಗಡಿ ಗ್ರಾಮದ ಸುತ್ತಮುತ್ತ ಕೃಷಿ ಫಸಲು ನಾಶ ಮಾಡಿ ಕಾರ್ಮಿಕರು ಹಾಗೂ ಮಾಲಕರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಒಂಟಿಯಂಗಡಿಯ ಕಾಫಿ ತೋಟವೊಂದರಲ್ಲಿ ಏಳು ಕಾಡಾನೆಗಳೊಂದಿಗೆ ಕಾಣಿಸಿಕೊಂಡ 32 ವರ್ಷದ ಪುಂಡಾನೆಯನ್ನು ಸಾಕಾನೆಗಳ ಸಹಕಾರದಿಂದ ಅರೆವಳಿಕೆ ನೀಡಿ ಸೆರೆ ಹಿಡಿಯಲಾಯಿತು. ರಸ್ತೆಗೆ ಕರೆತಂದ ನಂತರ ಲಾರಿಯನ್ನೇರಲು ನಿರಾಕರಿಸಿದ ಕಾಡಾನೆಯನ್ನು ಜೆಸಿಬಿ ಕ್ರೇನ್ ಬಳಸಿ ಲಾರಿಗೆ ಹಾಕಲಾಯಿತು. ನಂತರ ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರಕ್ಕೆ ಸ್ಥಳಾಂತರಿಸಲಾಯಿತು.
ಅಮ್ಮತ್ತಿ, ಪುಲಿಯೇರಿ, ಇಂಜಲಗೆರೆ, ಒಂಟಿಯಂಗಡಿ, ಕಣ್ಣಂಗಾಲ ಮತ್ತಿತರ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾಡಾನೆ ಮೂವರ ಮೇಲೆ ದಾಳಿ ಮಾಡಿತ್ತು. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ತಕ್ಷಣ ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯುವಂತೆ ಸೂಚಿಸಿದ ಹಿನ್ನೆಲೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು.
ಮತ್ತಿಗೋಡು ಸಾಕಾನೆ ಶಿಬಿರದ ನಾಲ್ಕು ಸಾಕಾನೆಗಳು, ಮಾವುತರು, ಕಾವಾಡಿಗರ ಸಹಕಾರ ಪಡೆದು ನಡೆಸಿದ ಕಾರ್ಯಾಚರಣೆಯಲ್ಲಿ ಡಿಎಫ್‍ಓ ಶರಣಬಸಪ್ಪ, ಎಸಿಎಫ್ ನೆಹರು ಆರ್‍ಎಫ್‍ಓ ಕಳ್ಳಿರ ಎಂ.ದೇವಯ್ಯ, ಅಧಿಕಾರಿಗಳಾದ ಸಂಜಿತ್ ಸೋಮಯ್ಯ, ಕನ್ನಂಡ ರಂಜನ್, ನಿಂಬಾಳ್ಕರ್, ಚಂದ್ರಶೇಖರ್, ಆನಂದ, ಅನಿಲ್, ಅರುಣ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.