ವಕ್ಫ್ ವಿಚಾರ | ವಿಪಕ್ಷ ನಾಯಕ ಅಶೋಕ್, ಸಚಿವ ಝಮೀರ್ ಅಹ್ಮದ್ ನಡುವೆ ವಾಗ್ವಾದ

Update: 2024-12-13 14:38 GMT
ಝಮೀರ್‌ ಅಹ್ಮದ್/ಅಶೋಕ್

ಬೆಳಗಾವಿ : ವಕ್ಫ್ ಬೋರ್ಡ್ ವತಿಯಿಂದ ರೈತರಿಗೆ ನೋಟಿಸ್ ಕೊಡುತ್ತಿರುವ ವಿಚಾರವಾಗಿ ಶುಕ್ರವಾರ ವಿಧಾನಸಭೆಯಲ್ಲಿ ನಡೆದ ಚರ್ಚೆ ವೇಳೆ ಸಚಿವ ಝಮೀರ್ ಅಹ್ಮದ್ ಖಾನ್ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಡುವೆ ವಾಗ್ವಾದ ನಡೆಯಿತು.

ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅಶೋಕ್, ಮೈಸೂರಿನ ಮುನೇಶ್ವರ ನಗರದಲ್ಲಿ 101 ಮನೆಗಳಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್ ನೀಡಿರುವ ದಾಖಲೆಗಳನ್ನು ನೀಡುತ್ತೇನೆ. ತಪ್ಪಿದ್ದರೆ ವಿಪಕ್ಷ ನಾಯಕನ ಸ್ಥಾನದಲ್ಲಿ ಇರುವುದಿಲ್ಲ. ಕಟಕಟೆಯಲ್ಲಿ ನಿಲ್ಲುತ್ತೇನೆ, ನನಗೆ ಛೀಮಾರಿ ಹಾಕಿ. ಸಚಿವರು ತಪ್ಪು ಮಾಡಿದ್ದರೆ ಅವರಿಗೆ ಛೀಮಾರಿ ಹಾಕುತ್ತೀರಾ ಎಂದು ಸ್ಪೀಕರ್‌ಗೆ ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಝಮೀರ್ ಅಹ್ಮದ್ ಖಾನ್, ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. ವಕ್ಫ್ ಬೋರ್ಡ್‍ನಿಂದ ಯಾರಿಗೂ ನೋಟಿಸ್ ಕೊಟ್ಟಿಲ್ಲ. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಗೆ ಮಾತ್ರ ನೋಟಿಸ್ ಕೊಡುವ ಅಧಿಕಾರ ಇರೋದು. ಮೈಸೂರಿನಲ್ಲಿ ಒಂದೇ ಗ್ರಾಮದಲ್ಲಿ 101 ಮನೆಗಳಿಗೆ ನೋಟಿಸ್ ಕೊಟ್ಟಿರುವ ಕುರಿತು ದಾಖಲೆ ಕೊಡಿ. ಬೇರೆಯವರ ಆಸ್ತಿಗೆ ವಕ್ಫ್ ನೋಟಿಸ್ ಕೊಟ್ಟಿದ್ದರೆ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಲ್ಲದೇ, ರಾಜಕೀಯದಿಂದಲೇ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಪ್ರತಿ ಸವಾಲು ಹಾಕಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಹಿರಿಯ ಸದಸ್ಯ ಬಸವರಾಜ ರಾಯರೆಡ್ಡಿ, ವಕ್ಫ್ ಕಾಯ್ದೆಯಡಿ ವಕ್ಫ್ ಮಾದರಿ ನಿಯಮಗಳನ್ನು 2016ರಲ್ಲಿ ಕೇಂದ್ರ ಸರಕಾರವೇ ರೂಪಿಸಿದೆ. ಅದರಡಿಯಲ್ಲಿ ನೋಟಿಸ್‍ಗಳನ್ನು ಜಾರಿ ಮಾಡಲಾಗುತ್ತಿದೆ. ಬಿಜೆಪಿಯವರು ಕೇಂದ್ರದ ಮೇಲೆ ಒತ್ತಡ ಹೇರಿ ನಿಯಮಗಳಿಗೆ ತಿದ್ದುಪಡಿ ತಂದರೆ ಈ ಯಾವ ಸಮಸ್ಯೆಯೂ ಎದುರಾಗುವುದಿಲ್ಲ ಎಂದು ಸಲಹೆ ನೀಡಿದರು.

ಪ್ರತಿಪಕ್ಷ ನಾಯಕರು ವಕ್ಫ್ ಬೋರ್ಡ್‍ನಿಂದ ನೋಟಿಸ್‍ಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲಿ. ಇವರು ವಕ್ಫ್ ಬೋರ್ಡ್ ರಚನೆ, ಅದರ ಕಾರ್ಯನಿರ್ವಹಣೆ ಕುರಿತು ಚರ್ಚೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆ ತರಲು ಮುಂದಾಗಿದೆ. ಆದುದರಿಂದ, ಈ ವಿಚಾರ ಸಂಸತ್ತಿನಲ್ಲಿ ಚರ್ಚೆ ಮಾಡಲಿ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ವಕ್ಫ್ ಬೋರ್ಡ್‍ನವರು ರೈತರ ಆಸ್ತಿಯನ್ನು ಕಬಳಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾವ ರೈತರ ಜಮೀನನ್ನು ಕಬಳಿಸುತ್ತಿಲ್ಲ. ವಕ್ಫ್ ಆಸ್ತಿಯಲ್ಲಿ ದೇವಸ್ಥಾನ ಕಟ್ಟಿದ್ದರೆ ಅದನ್ನು ತೆಗೆಯಲು ಸಾಧ್ಯವಿಲ್ಲ ಎಂದು ಅಶೋಕ್‍ಗೆ ಅವರು ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News