ವಕ್ಪ್‌ ಆಸ್ತಿ ವಿವಾದ | ಸಿಎಂ ಸಿದ್ದರಾಮಯ್ಯ ಕೂಡಲೇ ಸ್ಪಷ್ಟನೆ ನೀಡಲಿ : ಆರ್.ಅಶೋಕ್

Update: 2024-10-28 12:55 GMT

ಆರ್.ಅಶೋಕ್

ಬೆಂಗಳೂರು : ಕಾಂಗ್ರೆಸ್ ಸರಕಾರ ಹಾಗೂ ವಕ್ಫ್ ಬೋರ್ಡ್‍ನಿಂದ ಲ್ಯಾಂಡ್ ಜಿಹಾದ್ ಆರಂಭವಾಗಿದ್ದು, ಬಡ ರೈತರ ಜಮೀನನ್ನು ಕಬಳಿಸಲು ಎಲ್ಲ ಬಗೆಯ ಪ್ರಯತ್ನ ಮಾಡಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಕೂಡಲೇ ಸ್ಪಷ್ಟೀಕರಣ ನೀಡಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕಾಂಗ್ರೆಸ್ ಸರಕಾರ ಬಂದ ನಂತರ ಇಡೀ ಕರ್ನಾಟಕ ಒಂದೇ ಸಮುದಾಯಕ್ಕೆ ಸೇರಿದ್ದು ಎಂಬಂತೆ ಆಡುತ್ತಿದೆ. ಕಾಂಗ್ರೆಸ್‍ನ ತುಷ್ಟೀಕರಣದಿಂದಾಗಿ ಹಲ್ಲೆಯಾಗಿದೆ. ಗಣೇಶ ವಿಸರ್ಜನೆಗೆ ಅವಕಾಶವಿಲ್ಲ. ಈಗ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದಲ್ಲಿ ಸುಮಾರು 12 ಸಾವಿರ ಹಾಗೂ ಇಡೀ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 15 ಸಾವಿರ ಎಕರೆ ಭೂಮಿ ಕಬಳಿಸಲು ವಕ್ಫ್ ಬೋರ್ಡ್ ಯೋಜನೆ ರೂಪಿಸಿದೆ. ಇದಕ್ಕಾಗಿ ಕಂದಾಯ ಇಲಾಖೆಯಿಂದ 139 ರೈತರಿಗೆ ತಿಳಿವಳಿಕೆ ನೋಟಿಸ್ ನೀಡಲಾಗಿದೆ. ಇದು ಸ್ಪಷ್ಟವಾಗಿ ಸರಕಾರದಿಂದಲೇ ನಡೆಯುತ್ತಿರುವ ಲ್ಯಾಂಡ್ ಜಿಹಾದ್ ಎಂದು ಅವರು ದೂರಿದ್ದಾರೆ.

ರಾಜ್ಯದಲ್ಲಿ ಬಾಂಬ್ ಸ್ಪೋಟವಾಗಿದೆ. ಪಾಕಿಸ್ತಾನಕ್ಕೆ ಜೈಕಾರ ಹಾಕಲಾಗಿದೆ. ಲವ್ ಜಿಹಾದ್‍ನಿಂದ ಹಿಂದೂ ಯುವತಿಯರು ಸಾಯುತ್ತಿದ್ದಾರೆ. ಈಗ ಲ್ಯಾಂಡ್ ಜಿಹಾದ್ ಆರಂಭವಾಗಿದೆ. ಕಳೆದ ತಿಂಗಳು ಜಿಲ್ಲೆಗೆ ಬಂದಿದ್ದ ಸಚಿವ ಝಮೀರ್ ಅಹ್ಮದ್ ಖಾನ್, ಗೆಜೆಟ್ ಆಗಿರುವ ಆಸ್ತಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲು ಮೌಖಿಕ ಆದೇಶ ಮಾಡಿದ್ದಾರೆ. ಈ ಮೂಲಕ ಸರಕಾರದಿಂದಲೇ ಅಧಿಕೃತವಾಗಿ ಒತ್ತುವರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಆಧುನಿಕ ಟಿಪ್ಪು ಸುಲ್ತಾನ್: ಸಚಿವ ಝಮೀರ್ ಅಹ್ಮದ್, ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ. ಈ ರೀತಿಯಾದರೂ ಭೂಮಿ ಕಸಿದು, ಸಿಎಂ ಆಗುವ ಯೋಜನೆ ರೂಪಿಸಲಾಗಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಮುಡಾ ನಿವೇಶನ ಲೂಟಿ ಮಾಡುತ್ತಾರೆ. ಮತ್ತೊಂದು ಕಡೆ ಖರ್ಗೆ ಕುಟುಂಬ ಸಿಎ ನಿವೇಶನ ಲೂಟಿ ಮಾಡುತ್ತದೆ. ಈಗ ಝಮೀರ್ ಕೂಡ ಈ ಪಟ್ಟಿಗೆ ಸೇರಿ ಭೂಮಿ ಕೊಳ್ಳೆ ಹೊಡೆದು ವಕ್ಫ್‌ಗೆ ಸೇರಿಸಲು ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ವಕ್ಫ್ ಆಸ್ತಿ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ವಿರೋಧಿಸಿ ವಿಜಯಪುರದ ರೈತರು ಈ ವರ್ಷ ದೀಪಾವಳಿ ಆಚರಿಸದಿರಲು ನಿರ್ಧರಿಸಿದ್ದಾರೆ. ಅನ್ನ ನೀಡುವ ರೈತರ ಭೂಮಿಗೆ ಕನ್ನ ಹಾಕಿ, ರೈತರ ಮನೆ ದೀಪ ಕಸಿದುಕೊಂಡ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರ ಶಾಪ ತಟ್ಟದೇ ಇರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರದಲ್ಲಿ ಚರ್ಚಿಸಲಿ: ಕೇಂದ್ರದ ಉದ್ದೇಶಿತ ವಕ್ಫ್ ಕಾಯ್ದೆ ತಿದ್ದುಪಡಿ ಪ್ರಸ್ತಾವಕ್ಕೆ ರಾಜ್ಯ ವಕ್ಫ್ ಬೋರ್ಡ್ ವಿರೋಧ ವ್ಯಕ್ತಪಡಿಸಿದೆ. ವಕ್ಫ್ ಬೋರ್ಡ್ ಆಡಳಿತ ಮಂಡಳಿ ಸಭೆಯಲ್ಲಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಜಂಟಿ ಸಂಸದೀಯ ಸಮಿತಿ ರಚಿಸಿ, ಎಲ್ಲ ವಕ್ಫ್ ಬೋರ್ಡ್‍ಗಳಿಂದ ಮಾಹಿತಿ ಕೇಳಿದೆ. ಆದರೆ ಕರ್ನಾಟಕದ ವಕ್ಫ್ ಬೋರ್ಡ್ ಇದನ್ನು ವಿರೋಧಿಸಿದೆ. ನಾವು ಮಾಹಿತಿ ಕೊಡಲ್ಲ, ನಮ್ಮದು ಸ್ವಾಯತ್ತ ಸಂಸ್ಥೆ ಎಂದು ಸಚಿವ ಝಮೀರ್ ಅಹಮದ್ ಹೇಳಿದ್ದಾರೆ. ಹಳೆಯ ಎಲ್ಲ ನಿಯಮ, ಕಾನೂನುಗಳಿಗೆ ಮೋದಿ ಸರಕಾರ ಬದಲಾವಣೆ ತರಲಿದೆ. ಇದಕ್ಕೂ ಮುನ್ನ ಆದಷ್ಟು ಭೂಮಿ ಕಬಳಿಸಬೇಕೆಂಬುದು ಇವರ ಉದ್ದೇಶ ಎಂದು ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News