ಹತ್ರಾಸ್ ಅತ್ಯಾಚಾರ ನಡೆದಾಗ ಮೋದಿ ನೀರೋ ದೊರೆ ಆಗಿರಲಿಲ್ಲವೇ?: ಸಚಿವ ದಿನೇಶ್ ಗುಂಡೂರಾವ್

Update: 2023-12-23 13:52 GMT

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದೊರೆ ನೀರೋ ಪಟ್ಟ ಕಟ್ಟುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರೇ, ಹತ್ರಾಸ್ ಅತ್ಯಾಚಾರ ಘಟನೆ ನಡೆದಾಗ ಮೋದಿಯವರು ನೀರೋ ದೊರೆ ಆಗಿರಲಿಲ್ಲವೇ? ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ರೈತರ ಪ್ರತಿಭಟನೆ ನಡೆದಾಗ, ಲಖೀಂಪುರ ಖೇರಿಯಲ್ಲಿ ಬಿಜೆಪಿ ಸಂಸದನ ಮಗ ರೈತರ ಮೇಲೆ ಜೀಪು ಹರಿಸಿದಾಗ, ಮಣಿಪುರದಲ್ಲಿ ಹಿಂಸಾಚಾರ ನಡೆದು ಸಾವಿರಾರು ಜನರ ಕಗ್ಗೊಲೆ ನಡೆದಾಗ, ಅಷ್ಟೇ ಏಕೆ, ಈಗ ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿದ್ದರೂ ನೀರೋ ದೊರೆಯಂತೆ ವರ್ತಿಸುತ್ತಿರುವವರು ಯಾರು ವಿಜಯೇಂದ್ರರವರೇ? ಎಂದು ಕೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರಿಗೆ ಸಿದ್ದರಾಮಯ್ಯ ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದು ಆಡಂಬರದಂತೆ ಕಂಡಿದೆ. ವಿಜಯೇಂದ್ರರವರೆ ಸಿದ್ದರಾಮಯ್ಯ ಮತ್ತು ಮಂತ್ರಿಮಂಡಲದ ಕೆಲ ಸದಸ್ಯರು ದಿಲ್ಲಿಗೆ ಹೋಗಿದ್ದು ನಿಮ್ಮ ಹಾಗೆ ಸರಕಾರ ಉರುಳಿಸುವ ಆಪರೇಷನ್ ಮಾಡಲು ಅಲ್ಲ. ಬದಲಿಗೆ ಬರ ಪರಿಹಾರಕ್ಕಾಗಿ ಪ್ರಧಾನಿಗೆ ಮನವಿ ಸಲ್ಲಿಸಲು. ಇದು ನಿಮ್ಮ ಕಾಮಾಲೆ ಕಣ್ಣಿಗೆ ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’ಯಂತೆ ಕಂಡರೆ ಏನು ಮಾಡಲು ಸಾಧ್ಯ.? ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

2019ರಲ್ಲಿ ರಾಜ್ಯದಲ್ಲಿದ್ದ ಸಮ್ಮಿಶ್ರ ಸರಕಾರ ಉರುಳಿಸಲು ವಿಜಯೇಂದ್ರರ ಟೀಂ ಎಚ್.ಎ.ಎಲ್.ನಲ್ಲಿ ವಿಶೇಷ ವಿಮಾನವೊಂದನ್ನೇ ನಿಲ್ಲಿಸಿಕೊಂಡಿತ್ತು. ಆಪರೇಷನ್ ಕಮಲಕ್ಕೊಳಗಾದ ಶಾಸಕರನ್ನು ಮುಂಬೈ ಸೇರಿದಂತೆ ಬೇರೆಡೆ ಕರೆದೊಯ್ಯಲು ಈ ಐಷಾರಾಮಿ ವಿಮಾನವನ್ನೇ ಬಳಸಲಾಗಿತ್ತು ಎಂದು ಅವರು ಟೀಕಿಸಿದ್ದಾರೆ.

ಅಂದು ಆಪರೇಷನ್ ಕಮಲ ನಡೆಸಲು ಸಾವಿರಾರು ಕೋಟಿ ಹಣ ಖರ್ಚಾಗಿತ್ತು. ಆಗ ವಿಜಯೇಂದ್ರರವರಿಗೆ ಆಪರೇಷಮ್ ಕಮಲ ಎಂಬ ಯಲ್ಲಮ್ಮನ ಜಾತ್ರೆ ನಡೆಸಲು ಯಾರ ದುಡ್ಡು ಬಳಸಲಾಗಿತ್ತು ಎಂದು ಎದೆ ತಟ್ಟಿ ಹೇಳುವರೆ? ಎಂದು ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News