ಕರ್ನಾಟಕ ಬಂದ್ | ಬುರ್ಖಾ ಧರಿಸಿ, ಖಾಲಿ ನೀರಿನ ಬಿಂದಿಗೆ ತಲೆ ಮೇಲೆ ಇಟ್ಟು ವಾಟಾಳ್ ನಾಗರಾಜ್ ಪ್ರತಿಭಟನೆ

Update: 2023-09-29 06:17 GMT

ಬೆಂಗಳೂರು, ಸೆ.29: ಕಾವೇರಿ ನೀರು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ಆಗ್ರಹಿಸಿ ಇಂದು ನಡೆಸುತ್ತೀರುವ ಅಖಂಡ ಕರ್ನಾಟಕ ಬಂದ್ ವೇಳೆಯೇ ಕನ್ನಡ ಹೋರಾಟಗಾರರನ್ನು ಬಂಧಿಸುವ ಮೂಲಕ ಕರ್ನಾಟಕ ಗೂಂಡಾ ಪೊಲೀಸರ ರಾಜ್ಯವಾಗಿದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದಲ್ಲದೆ, ಬುರ್ಖಾ ಧರಿಸಿ ಆಕ್ರೋಶ ಹೊರಹಾಕಿದ್ದಾರೆ. 

ನಗರದಲ್ಲಿಂದು ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಯಿಂದಲೇ ಬುರ್ಖಾ ಧರಿಸಿ, ಖಾಲಿ ನೀರಿನ ಬಿಂದಿಗೆ ತಲೆ ಮೇಲೆಯಿಟ್ಟು ಹೊರಬಂದ ವಾಟಾಳ್ ನಾಗರಾಜ್ ಅವರು ಖುದ್ದು, ರಾಜ್ಯ ಸರ್ಕಾರವೇ ಪ್ರತಿಭಟನಾ ಮೆರವಣಿಗೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಇಡೀ ವ್ಯವಸ್ಥೆಯನ್ನೇ ಪೊಲೀಸ್ ಮಯ ಮಾಡಲಾಗಿದೆ ಎಂದು ಕಿಡಿಕಾರಿದರು.

ಬಂದ್ ಭಾಗವಾಗಿ ಇಂದು ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ಮೈದಾನದವರೆಗೆ ಶಾಂತಿಯುತ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಉದ್ದೇಶಪೂರಕವಾಗಿ 144 ಅಡಿಯಲ್ಲಿ ಜಾರಿಗೊಳಿಸಿ ಕನ್ನಡಪರ ಹೋರಾಟಗಾರರನ್ನು ಗುಂಪು, ಗುಂಪಾಗಿ ಬಂಧಿಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.

ಸರ್ಕಾರದಿಂದ ಅಸಹಕಾರ ಹಾಗೂ ವಿರೋಧದ ನಡುವೆ ಪೊಲೀಸ ಒತ್ತಡ ಹಾಗೂ ದೌರ್ಜನ್ಯದಿಂದ ಇಡೀ ಕರ್ನಾಟಕ ಗೂಂಡಾ ಪೊಲೀಸ್ ರಾಜ್ಯವಾಗಿದೆ. ಬೆಂಗಳೂರು ಒಂದಕ್ಕೆ ಐವತ್ತು ಸಾವಿರ ಪೊಲೀಸರ ನಿಯೋಜನೆ ಮಾಡಿ ಇಡೀ ರಾಜ್ಯಕ್ಕೆ ಲಕ್ಷಾಂತರ ಪೊಲೀಸರನ್ನು ನೇಮಿಸಿ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕಾವೇರಿ ಕುರಿತಾಗಿ ನಾವು ಹೋರಾಟ ಮಾಡಿ ಬಂದ್ ಮಾಡಿದರೆ ನಮ್ಮ ರಾಜ್ಯ ಸರ್ಕಾರ ನಮ್ಮನ್ನು ಬಂದ್ ಮಾಡಿ ಎರಡು ರೀತಿ ಬಂದ್ ಆಗಿದೆ. ಇಂದು ಅಖಂಡ ಕರ್ನಾಟಕ ಬಂದ್ ಭಾರಿ ಪ್ರಮಾಣದಲ್ಲಿ ಯಶಸ್ಸು ಕಂಡಿದೆ ಇದಕ್ಕೆ ನಾಡಿನ ಜನತೆಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಅಖಂಡ ಕರ್ನಾಟಕ ಬಂದ್ ಗೆ ಇಡೀ ರಾಜ್ಯದ ಜನತೆ ಸಹಕರಿಸಿದ್ದು ಕನ್ನಡ ಒಕ್ಕೂಟದ ಕರೆಗೆ ಗೌರವ ಕೊಟ್ಟು ಬೆಂಬಲ ಸೂಚಿಸಿದ್ದಾರೆ. ನಮ್ಮ ಸರ್ಕಾರ ನಿಜವಾಗಲೂ ಕಾವೇರಿ ವಿಷಯದಲ್ಲಿ ಅರ್ಥಮಾಡಿಕೊಳ್ಳಲಿಲ್ಲ. ಪ್ರತಿಭಟನಾ ಕಾರರನ್ನು ಎಲ್ಲೆಂದರಲ್ಲಿ ವಶಪಡಿಸಿಕೊಳ್ಳುತ್ತಿದ್ದಾರೆ ಎಂದರು.

ಇನ್ನೂ, ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಭಟನೆ ಮೆರವಣಿಗೆಗೆ ಅವಕಾಶವೇ ಇಲ್ಲ ಎಂದು ಹೇಳುವುದರ ಮೂಲಕ ಕನ್ನಡ ವಿರೋಧಿ ನಡೆ, ಅನುಸರಿಸಿದ್ದಾರೆ.‌ ಅಲ್ಲದೆ, ಅವರು ಎಂದೂ ಸಹ ಯಾವುದೇ ಹೋರಾಟ ಮಾಡಿದ ಉದಾಹರಣೆ ಇಲ್ಲ. ಹೀಗಾಗಿ, ಅವರಿಗೆ ಹೋರಾಟಗಾರರ ಗೌರವ, ಅವರ ಕನ್ನಡಪರ ಸೇವೆ ಹೇಗೆ ಅರ್ಥವಾಗಲಿದೆ ಎಂದು ಅವರು ಪ್ರಶ್ನಿಸಿದರು.

ಮತ್ತೊಂದೆಡೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ವ್ಯಂಗಭರಿತ ಮಾತುಗಳನ್ನಾಡಿದ್ದಾರೆ. ಆದರೆ ಕಾವೇರಿ ಹೋರಾಟ ಕುರಿತು ಗಂಭೀರವಾಗಿ ಅವರು ತೆಗೆದುಕೊಳ್ಳದಿದ್ದರೂ ನಾವು ಬಿಸಿಮುಟ್ಟಿಸುತ್ತೇವೆ ಎಂದರು.

ಕರ್ನಾಟಕ ಬಂದ್ ಮಾಡಿದರೆ ಇಲ್ಲಿನ ನೀರಿನ ಸಮಸ್ಯೆ ಕನ್ನಡಿಗರ ಆಕ್ರೋಶವು ಪ್ರಧಾನಿ ನರೇಂದ್ರ ಮೋದಿ ಹಾಗೂ ಇಡೀ ದೇಶಕ್ಕೆ ತಿಳಿಯಲಿದೆ. ಇದೇ ಉದ್ದೇಶಕ್ಕಾಗಿಯೇ ನಾವು ಹೋರಾಟ ನಡೆಸಲಾಗುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಅಡಗಿಲ್ಲ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News