ಕೋಮುವಾದಿಗಳ ಹತ್ಯೆ ಬೆದರಿಕೆಗೆ ಹೆದರುವವರು ನಾವಲ್ಲ: ಸಿಎಂ ಸಿದ್ದರಾಮಯ್ಯ

Update: 2023-09-05 18:09 GMT

ಬೆಂಗಳೂರು, ಸೆ.5: ಕೋಮುವಾದಿಗಳು ಒಡ್ಡುವ ಹತ್ಯೆ ಬೆದರಿಕೆಗಳಿಗೆ ಹೆದರಿಕೊಂಡು ತಮ್ಮ ವಿಚಾರ, ಹೋರಾಟಗಳಿಂದ ಹಿಂದೆ ಸರಿಯುವವರು ನಾವಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ನಗರದ ಪುರಭವನ ಸಭಾಂಗಣದಲ್ಲಿ ನಮ್ಮೆಲ್ಲರ ನಲ್ಮೆಯ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಅಗಲಿಯ ಆರು ವರ್ಷಗಳ ನೆನಪಿನಲ್ಲಿಗೌರಿ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ "ಸರ್ವಾಧಿಕಾಲದ ಹೊತ್ತಲ್ಲಿ ದೇಶವನ್ನು ಮರುಕಟ್ಟುವ ಕಲ್ಪನೆ" ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಕೋಮುವಾದಿಗಳು ನಮ್ಮ ಹೆದರಿಕೆಯನ್ನೆ ಬಂಡವಾಳ ಮಾಡಿಕೊಂಡು ವಿಚಾರಗಳನ್ನು, ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಾರೆ.ನಮ್ಮಲ್ಲಿರುವ ಭಯವೇ ಅವರಿಗೆ ಶಕ್ತಿಯಾಗಿ ಮಾರ್ಪಟ್ಟಿದೆ.ಆದರೆ, ನಾವು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಹೋರಾಟಗಳನ್ನು ಮುಂದುವರೆಸಿ ಅವರಿಗೆ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಗೌರಿ ಲಂಕೇಶ್ ಸಮಾಜದಲ್ಲಿ ದನಿ ಇಲ್ಲದವರ ದನಿಯಾಗಿದ್ದರು. ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗೌರಿ ನನ್ನನ್ಮು ಹತ್ತಾರು ಬಾರಿ ಭೇಟಿಯಾಗಿದ್ದರು. ಆದರೆ ಒಂದು ಬಾರಿಯೂ ಪತ್ರಿಕೆಗೆ ಸಹಾಯ ಕೇಳಲು, ತನ್ನ ಕುಟುಂಬಕ್ಕೆ ಸಹಾಯ ಕೇಳಲು, ವೈಯುಕ್ತಿಕ ಕೆಲಸಗಳಿಗಾಗಿ ಯಾವತ್ತೂ ಬಂದಿರಲಿಲ್ಲ. ಕೇವಲ ಆದಿವಾಸಿಗಳ, ರೈತರ, ಕಾರ್ಮಿಕರ ಸಮಸ್ಯೆಗಳಿಗಾಗಿ ಪರಿಹಾರ ಕೇಳಲು ಬರುತ್ತಿದ್ದರು ಎಂದು ಮುಖ್ಯಮಂತ್ರಿ ನೆನೆದರು.

ಗೌರಿಯನ್ನು ಕೊಂದವರು ಹೇಡಿಗಳು. ವೈಚಾರಿಕವಾಗಿ ಆಕೆಯನ್ನು ಎದುರಿಸಲಾಗದವರು ಕೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅತ್ಯಂತ ಧರ್ಮವಂತರಾಗಿ ಬದುಕುತ್ತಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಕೊಂದ ಮನಸ್ಥಿತಿಯೇ ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಅವರನ್ನು ಕೊಂದಿದೆ. ಮಹಾತ್ಮಗಾಂಧಿ ಅತ್ಯಂತ ಧರ್ಮನಿರಪೇಕ್ಷತೆಯಿಂದ ಬದುಕನ್ನು ಆಚರಿಸುತ್ತಿದ್ದರು. ಇದನ್ನು ಸಹಿಸಲಾಗದ ಮನಸ್ಥಿತಿ ಅವರನ್ನು ಕೊಂದು ಹಾಕಿದರು. ಗೌರಿ ಲಂಕೇಶ್ ಅವರು ಇಂದು ನಮ್ಮ ಜತೆಗಿಲ್ಲ ಆದರೆ ಅವರ ಅದಮ್ಯ ಚೇತನ ನಮ್ಮ ಜತೆಗಿದೆ ಎಂದು ಅವರು ನುಡಿದರು.

ಪತ್ರ ಬರೆಯುತ್ತಿರುವುದು ಒಬ್ಬನೇ, ಹಿಡಿಯುತ್ತೇವೆ:ಸಿಎಂ

ಮಹಾತ್ಮಗಾಂಧಿ, ಗೌರಿ ಲಂಕೇಶ್ ಮಾತ್ರವಲ್ಲ. ಯಾರು ಬಸವಾದಿ ಶರಣರು, ಅಂಬೇಡ್ಕರ್, ಬುದ್ಧರ ವಿಚಾರ ಧಾರೆಗಳನ್ನು ಆಚರಿಸುತ್ತಾ ಜಾತಿ ಅಸಮಾನತೆ, ಧರ್ಮ ಸಂಘರ್ಷವನ್ನು ವಿರೋಧಿಸುತ್ತಾರೋ ಅವರೆಲ್ಲರಿಗೂ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದಾರೆ.

ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿರುವ ಕಿಡಿಗೇಡಿಗಳು ಎಷ್ಟೇ ಪ್ರಬಲರಾಗಿದ್ದರೂ, ಅವರ ಹಿಂದೆ ಎಷ್ಟೇ ದೊಡ್ಡ ರಾಜಕೀಯ ಒತ್ತಾಸೆ ಇದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಲಾಗುವುದು. ಇನ್ನೂ, ಈ ಪತ್ರ ಬರೆಯುತ್ತಿರುವುದು ಒಬ್ಬನೇ, ಆತ ಹೆದರಿ ಸಹಿ ಕೊಡ ಹಾಕುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ʼಗೌರಿ ಪರಿಪೂರ್ಣ ಹೋರಾಟಗಾರ್ತಿʼ

ಗೌರಿ ಲಂಕೇಶ್ ಅವರು ಪತ್ರಕರ್ತೆ ಎಂಬುದಕ್ಕಿಂತ ಅವರೊಬ್ಬರ ಹೋರಾಟಗಾರ್ತಿ. ಎಲ್ಲೇ ಅನ್ಯಾಯವಾದರೂ ಆ ಅನ್ಯಾಯವನ್ನು ಪ್ರತಿಭಟಿಸುವ, ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಗೌರಿ ಲಂಕೇಶ್ ಮಾಡುತ್ತಿದ್ದರು. ಅವರು ಬದುಕಬೇಕಿತ್ತು. ಕುಟುಂಬಕ್ಕಾಗಿ ಅಲ್ಲ, ಸಮಾಜದಲ್ಲಿ ದನಿ ಇಲ್ಲದೆ, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟಕ್ಕಾಗಿ.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Full View

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News