ನಾವು ಬಲಿಷ್ಟವಾಗಿದ್ದೇವೆ, ಸರಕಾರ ಬೀಳಿಸುವುದು ತಿರುಕನ ಕನಸು: ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-03-10 14:01 GMT

Photo: x/@DKShivakumar

ಬೆಂಗಳೂರು: ‘ರಾಜ್ಯದ ಜನತೆ ಆಶೀರ್ವಾದದಿಂದ ಕಾಂಗ್ರೆಸ್ 135 ಸ್ಥಾನ ಹಾಗೂ ಮೂವರು ಪಕ್ಷೇತರರ ಶಾಸಕರ ಬೆಂಬಲದೊಂದಿಗೆ ನಾವು ಬಲಿಷ್ಟವಾಗಿದ್ದೇವೆ. ಹೀಗಾಗಿ ನಮ್ಮ ಸರಕಾರವನ್ನು ಬೀಳಿಸಲು ಆಗುವುದಿಲ್ಲ. ನಿಮ್ಮ ಪಕ್ಷದ ನಾಯಕರು, ಸರಕಾರ ಬೀಳಿಸುವ ವಿಚಾರದಲ್ಲಿ ತಿರುಕನ ಕನಸು ಕಾಣುತ್ತಿದ್ದಾರೆಂದು ಬಿಎಸ್‍ವೈಗೆ ತಿಳಿಸಲು ಬಯಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ಕೆಂಗೇರಿಯಲ್ಲಿ ಪರಿಷತ್ ಉಪ ಚುನಾವಣೆಯಲ್ಲಿ ಪುಟ್ಟಣ್ಣ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಕೋಮುವಾದಿ ಬಿಜೆಪಿ ಸಮಾಜವನ್ನು ಒಡೆಯುತ್ತದೆಂಬ ಕಾರಣಕ್ಕೆ ಅವರನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿಗೆ 5 ವರ್ಷಗಳ ಕಾಲ ಸಿಎಂ ಮಾಡಿದೆವು. ಈ ಮೈತ್ರಿ ಸರಕಾರವನ್ನು ಕೆಡವಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಅವರನ್ನೆ ಕುಮಾರಸ್ವಾಮಿ ಅಪ್ಪಿಕೊಂಡು ಅವರ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

"ಇಂತಹ ನೀತಿಗೆಟ್ಟ ರಾಜಕಾರಣ ಕಂಡು ನನಗೆ ಅಸಹ್ಯವಾಗುತ್ತದೆ. ಜನ ಯಾರನ್ನು ನಂಬಬೇಕು ಎಂಬುದು ತಿಳಿಯುತ್ತಿಲ್ಲ. ಯಾರೂ ಏನೇ ಒಂದಾಗಲಿ, ರಾಜ್ಯ ಸಭೆ ಚುನಾವಣೆಯಲ್ಲಿ ನಮ್ಮ ಶಾಸಕರಿಗೆ ತಲಾ 50ಕೋಟಿ ರೂ.ಕೊಟ್ಟು ಸರಕಾರ ಬೀಳಿಸಲು ಬಿಲ್ಲು-ಬಾಣ ತೆಗೆದುಕೊಂಡಿದ್ದರು. ನಮ್ಮ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನು ಬಿಜೆಪಿಗರು ಸಂಪರ್ಕ ಮಾಡಿದ್ದರು. ಆದರೆ ಇದ್ಯಾವುದೂ ಸಾಧ್ಯವಾಗಲಿಲ್ಲ" ಎಂದು ಅವರು ಲೇವಡಿ ಮಾಡಿದರು.

ನಿಮ್ಮ ಗೆಲುವು: ಶಿಕ್ಷಕರು ಎಂದರೆ ವಿದ್ಯಾವಂತರು, ಪ್ರಜ್ಞಾವಂತರು. ಬೆಂಗಳೂರಿನ ಶಿಕ್ಷಕರು ಪುಟ್ಟಣ್ಣ ಅವರನ್ನು ಗೆಲ್ಲಿಸಿದ್ದೀರಿ. ಇದು ಪುಟ್ಟಣ್ಣನ ಗೆಲುವು ಮಾತ್ರವಲ್ಲ. ಇದು ನಿಮ್ಮ ಗೆಲುವು. ಎರಡು ಪಕ್ಷಗಳ ಅಪವಿತ್ರ ಮೈತ್ರಿಯನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಕೊಟ್ಟಿದ್ದೀರಿ. ಇದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ನಾವಿಲ್ಲಿಗೆ ಬಂದಿದ್ದೇವೆ. ನಿಮ್ಮ ಬೇಡಿಕೆಗಳನ್ನು ಪುಟ್ಟಣ್ಣ ಅವರು ನಮಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಸುರೇಶ್ ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂದು ಧ್ವನಿ ಎತ್ತಿದಕ್ಕೆ ಪ್ರಧಾನಿ, ಹಣಕಾಸು ಸಚಿವರು ಸೇರಿದಂತೆ ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ. ನಾವು ನಮ್ಮ ಹಕ್ಕು ಕೇಳಿದರೆ ದೇಶ ಒಡೆಯುತ್ತಾರೆಂದು ಸುಳ್ಳು ಪ್ರಚಾರ ಮಾಡಿದರು. ಬಿಜೆಪಿಯ 27 ಸಂಸದರು ಈವರೆಗೂ ಕೇಂದ್ರ ಸರಕಾರದ ಬಳಿ ಒಂದು ಮಾತನ್ನು ಆಡಿಲ್ಲ. ಬರ ವಿಚಾರದಲ್ಲಿ ಕಪಟ ನಾಟಕ ಮಾಡುತ್ತಿದ್ದಾರೆ. ನಾವು ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದೆವು. ಕುಮಾರಸ್ವಾಮಿ, ದೇವೇಗೌಡರು ಹಾಗೂ ಬಿಜೆಪಿ ಸಂಸದರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತಿಲ್ಲ ಯಾಕೆ? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News