ನಾವು ವೋಟಿಗಾಗಿ ಗ್ಯಾರಂಟಿಗಳನ್ನು ಹೇಳಲಿಲ್ಲ: ದಿನೇಶ್ ಗುಂಡೂರಾವ್
ಹುಬ್ಬಳ್ಳಿ: ಓಟಿಗಾಗಿ ನಾವು ಗ್ಯಾರಂಟಿಗಳನ್ನು ಹೇಳಿಲ್ಲ. ವಿರೋಧ ಪಕ್ಷದವರು ಹೇಗೆ ಮಾಡುತ್ತೀರಿ ಎಂದು ಟೀಕೆ ಮಾಡಿ, ಮೊಸರಲ್ಲಿಕಲ್ಲು ಹುಡುಕುವ ಕೆಲಸ ಮಾಡಿದ್ರು. ನಾವು ಮಾತು ಉಳಿಸಿಕೊಂಡು ಕಾಂಗ್ರೆಸ್ ಏನೆಂದು ದೇಶಕ್ಕೆ ತೋರಿಸಿದ್ದೇವೆ. ರಾಜ್ಯದ ಹಿತಾಸಕ್ತಿ ಕಾಪಾಡೋದು ನಮ್ಮ ಕೆಲಸ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸರ್ಕಾರ ಬಂದು 100 ದಿನ ಆಗಿದೆ. 100 ದಿನದಲ್ಲಿ ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 100 ದಿನ ಆಗಿರೋದಕ್ಕೆ ಬಹಳ ತೃಪ್ತಿ, ಹೆಮ್ಮೆ ಇದೆ. ಪ್ರಮಾಣಿಕತೆ,ದಕ್ಷತೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ. ಹೊಸ ಸರ್ಕಾರ ಬಂದ ತಕ್ಷಣ ಆಶ್ವಾಸನೆ ಇಡೇರಿಸಲು ಸರ್ಕಾರ ಮನಸ್ಸು ಮಾಡಲ್ಲ. ಆದ್ರೆ ನಾವು 100 ದಿನದಲ್ಲಿ ಈಡೇರಿಸಿದ್ದೇವೆ. 100 ದಿನದ ಸಾಧನೆ ಬಗ್ಗೆ ಪುಸ್ತಕ ಬಿಡುಗಡೆ ಮಾಡುತ್ತೇವೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಒಳ್ಳೆಯ ಆಡಳಿತ ಕೊಡುತ್ತಿದೆ. ಮೈಸೂರಿನಲ್ಲಿ ಗೃಹಲಕ್ಷ್ಮಿ ದೊಡ್ಡ ಮಟ್ಟದಲ್ಲಿ ಉದ್ಘಾಟನೆ ಆಗಲಿದೆ. ಇದು ನಮಗೆಲ್ಲ ಹೆಮ್ಮೆ ಎಂದರು.
ನಾನು ಸಚಿವನಾದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇನೆ. ಹತ್ತು ದಿನದ ನಂತರ ಆರೋಗ್ಯ ಇಲಾಖೆ ಸಭೆ ಮಾಡುತ್ತೇನೆ. ಹುಬ್ಬಳ್ಳಿ- ಧಾರವಾಡದ ಬಗ್ಗೆ ನನಗೆ ಮಾಹಿತಿ ಇದೆ. ನಾನು ಹಿಂದೆ ಮೂರು ವರ್ಷ ಇಲ್ಲಿ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ ಎಂದರು.
ಜನರಿಗೆ ಸಾಂಕ್ರಾಮಿಕ ರೋಗಗಳು ಜಾಸ್ತಿ ಆಗುತ್ತಿದ್ದು, ಜನರಿಗೆ ಸಮಸ್ಯೆಯಾಗಿದೆ. ಇದಕ್ಕೆಲ್ಲ ಕಾರಣ ನಮ್ಮ ಜೀವನ ಶೈಲಿ, ಜೆನೆಟಿಕ್ ಸಮಸ್ಯೆ ಕಾರಣ. ಇದನ್ನು ಕಂಟ್ರೋಲ್ ಮಾಡಲು ಇಲಾಖೆಯಿಂದ ವಿಶೇಷ ಕಾರ್ಯಕ್ರಮ ನಡೆಯಲಿದೆ. ಎಂಟು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಯೋಜನೆ ಜಾರಿಯಾಗಲಿದೆ. ನಮ್ಮ ಇಲಾಖೆಯೇ ಅವರ ಹತ್ತಿರ ಹೋಗುವ ಪ್ಲ್ಯಾನ್ ಮಾಡುತ್ತಿದ್ದೇವೆ. ಮುಂದಿನ ತಿಂಗಳು ಅಶಾಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ. ಡಾಕ್ಟರ್ ಗಳೆಲ್ಲ ಹಳ್ಳಿಗಳಿಗೆ ಹೋಗಬೇಕು. ಆದ್ದರಿಂದ ವಾಹನಗಳಿಗೆ ಟೆಂಡರ್ ಕರೆಯುತ್ತೇವೆ. ನಾವು ಔಷಧಿ ಅವರ ಮನೆಗೆ ಹೋಗಿ ತಲುಪಿಸುತ್ತೇವೆ ಎಂದರು.